ಹಿತಮಿತ ಮೃದುವಚನದ ಶಕ್ತಿ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ | 70ನೇ ವರ್ಷದ ಜನ್ಮದಿನಾಚರಣೆ ಸಂದರ್ಭದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಾಹಿತ್ಯದ ಮೆಲುಕು - Mahanayaka
9:50 AM Thursday 14 - November 2024

ಹಿತಮಿತ ಮೃದುವಚನದ ಶಕ್ತಿ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ | 70ನೇ ವರ್ಷದ ಜನ್ಮದಿನಾಚರಣೆ ಸಂದರ್ಭದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಾಹಿತ್ಯದ ಮೆಲುಕು

mudnakudu chinnaswamy
23/09/2024

ಲೇಖನ: ಡಾ.ಶಿವಕುಮಾರ

ಮುಖ್ಯಸ್ಥರು, ಅಕ್ಕ ಐ.ಎ.ಎಸ್ ಅಕಾಡೆಮಿ, ಬೆಂಗಳೂರು

ಡಾ.ಮೂಡ್ನಾಕೂಡು ಚಿನ್ನಸ್ವಾಮಿಯವರು ಕನ್ನಡ ಸಾಹಿತ್ಯದ ಮಹತ್ವದ ಕವಿ. ಮಿತಭಾಷಿಯೂ, ಸೂಕ್ಷ್ಮ ಸಂವೇದನಾಶೀಲರೂ ಆದ ಇವರು ತಮ್ಮ ಸುತ್ತಮುತ್ತಲಿನ ಎಷ್ಟೊಂದು ಉದ್ವಿಗ್ನತೆಗಳ ಬಗೆಗೆ ನಿರುದ್ವಿಗ್ನವಾಗಿ ಬರೆಯಬಲ್ಲರು. ಕಡಿಮೆ ಶಬ್ದಗಳಲ್ಲಿ ಘನತರವಾದ ಅರ್ಥವನ್ನು ನೀಡಿ ಓದುಗರನ್ನು ಚಿಂತನೆಗೆ ಹಚ್ಚಬಲ್ಲವರು. ಕಾವ್ಯ, ಕಥೆ, ನಾಟಕ, ವೈಚಾರಿಕ ಬರಹಗಳು, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಉತ್ಕೃಷ್ಟವಾದ ಬರವಣಿಗೆಯನ್ನು ಕನ್ನಡ ನಾಡಿಗೆ ಕೊಟ್ಟಂಥವರು. ಶೋಷಿತ ದಲಿತ ಸಮಾಜದಿಂದ ಹುಟ್ಟಿಬಂದು, ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ವತ್ ಜನರು ಗುರುತಿಸುವಂತಹ ಸಾಧನೆ ಮಾಡಿದವರು. ಕರ್ನಾಟಕ ರಾಜ್ಯದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನೂ ಪಡೆದವರು. ಅದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಜನಮಾನಸದಲ್ಲಿ ಅತ್ಯಂತ ಪ್ರೀತಿ–ಅಭಿಮಾನವನ್ನು ಗಳಿಸಿದವರು.

ಮೂಲತಃ ಮೂಡ್ನಾಕೂಡು ಚಿನ್ನಸ್ವಾಮಿಯವರು ಕಲೆ-ಸಂಸ್ಕೃತಿಗಳ ಶ್ರೀಮಂತಿಕೆಗೆ ಹೆಸರಾದ ಚಾಮರಾಜನಗರ ಜಿಲ್ಲೆಯವರು. ಕೆ.ಎಸ್.ಆರ್.ಟಿ.ಸಿ ಯಲ್ಲಿ ಉನ್ನತ ಅಧಿಕಾರಿಯಾಗಿದ್ದುಕೊಂಡು, ಅಧಿಕಾರದ ಒತ್ತಡದ ನಡುವೆ ಬರೆದವರು. “ನಾನೊಂದು ಮರವಾಗಿದ್ದರೆ” ಎಂಬ ಮಹತ್ತರ ಕವಿತೆಯ ಮೂಲಕ ದೇಶ-ವಿದೇಶಗಳಲ್ಲಿ ಹೆಸರಾದವರು. ಕೊಂಡಿಗಳು ಮತ್ತು ಮುಳ್ಳುಬೇಲಿಗಳು, ಮತ್ತೆ ಮಳೆ ಬರುವ ಮುನ್ನ, ಚಪ್ಪಲಿ ಮತ್ತು ನಾನು (ಕವಿತಾ ಸಂಕಲನಗಳು), ಮೋಹದ ದೀಪ, ಪಾಪ ಪ್ರಜ್ಞೆ (ಕಥಾ ಸಂಕಲನಗಳು), ಕೆಂಡಮಂಡಲ, ಬಹುರೂಪಿ (ನಾಟಕಗಳು), ಒಂದು ಕೊಡ ಹಾಲಿನ ಸಮರ, ಅಪರಿಮಿತ ಕತ್ತಲೆ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ (ವೈಚಾರಿಕ ಲೇಖನ ಸಂಕಲನಗಳು), ಧಮ್ಮಯಾನ, ಬುದ್ಧಾನುಶಾಸನಂ, ಅಂಗುತ್ತರ ನಿಕಾಯ, ದೀಘನಿಕಾಯದ ಕೆಲಭಾಗಗಳ ಅನುವಾದ (ಬೌದ್ಧ ತಾತ್ವಿಕ ಮಿಮಾಂಸೆಯ ಕೃತಿಗಳು) – ಹೀಗೆ ಹಲವು ಆಯಾಮಗಳಲ್ಲಿ ಅವರ ಸಾಹಿತ್ಯ ಕೃಷಿ ವಿಸ್ತಾರವಾಗಿ ಹರಡಿದೆ. ಇವರ ಹಲವಾರು ಕೃತಿಗಳು ಇಂಗ್ಲೀಷ್, ಸ್ಪಾನಿಷ್, ಫ್ರಂಚ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡು ವಿದೇಶಗಳಲ್ಲೂ ಜನಮನ್ನಣೆಗಳಿಸಿವೆ. ವೆನಿಜುವೆಲಾ ಸರ್ಕಾರ ತನ್ನ 2005 ರ ವಿಶ್ವ ಕಾವ್ಯಮಾಲೆಯ ಅಡಿಯಲ್ಲಿ “ಪೊಯೆಮಾಸ್-–ಮೂಡ್ನಾಕೂಡು” ಎಂಬ ಇವರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಸ್ಪ್ಯಾನಿಷ್ ಭಾಷೆಗೆ ಗ್ರಂಥ ರೂಪದಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಕವಿ ಎಂಬ ಹೆಗ್ಗಳಿಕೆ ಮೂಡ್ನಾಕೂಡು ಚಿನ್ನಸ್ವಾಮಿಯವರದು.




ಇವರು ರಂಗಾಯಣ ರೆಪರ್ಟರಿಗೆ ‘ಬಹುರೂಪಿ’ ಎಂಬ ಕಾವ್ಯನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರಲ್ಲದೇ, ಪೂಚಂತೇ ಅವರ ಕುರಿತ ‘ಮಾಯಾಲೋಕ’ ಎಂಬ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ‘ಜರ್ನಲ್ ಆಫ್ ಕಾಮನ್ವೆಲ್ತ್ ಲಿಟರೇಚರ್’ ಎಂಬ ಬ್ರಿಟನ್ನಿನ ಪ್ರತಿಷ್ಟಿತ ಸಾಹಿತ್ಯ ಪತ್ರಿಕೆ 2019 ರ ವಿಶೇಷ ಸಂಚಿಕೆಯಲ್ಲಿ ಇವರ ಸಂದರ್ಶನವನ್ನು ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ವಾರಂಬಳ್ಳಿ ಕಾವ್ಯ ಪ್ರಶಸ್ತಿ, ಶಿರಸಂಗಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಹಾಗೂ ಬೇಂದ್ರೆ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ. ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2009) ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2014) ಗಳಿಗೂ ಭಾಜನರಾಗಿರುತ್ತಾರೆ.  ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು 2019 ರಲ್ಲಿ ಇವರ ಸಮಗ್ರ ಸಾಹಿತ್ಯವನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ. 2022ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಮೂಡ್ನಾಕೂಡು ಅವರು ತಮ್ಮ ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಎಂಬ ಕೃತಿಗೆ ಪಡೆದಿದ್ದಾರೆ. ಫೆಬ್ರವರಿ 2010 ರಲ್ಲಿ 2ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಏಪ್ರಿಲ್ 2011 ರಲ್ಲಿ ಭಾಲ್ಕಿಯಲ್ಲಿ ನಡೆದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಮತ್ತು ಜೂನ್ 2011 ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ. “ಔಟ್ಲುಕ್” ಇಂಗ್ಲೀμï ವಾರಪತ್ರಿಕೆ ತನ್ನ 26, ಏಪ್ರಿಲ್ 2021 ರ ಅಂಬೇಡ್ಕರ್ ವಿಶೇಷ ಸಂಚಿಕೆಗಾಗಿ ನಡೆಸಿದ ಸಮೀಕ್ಷೆಯಲ್ಲಿ ‘ಭಾರತವನ್ನು ಪುನರ್‍ನಿರ್ಮಾಣ ಮಾಡುವ 50 ದಲಿತ ಸಾಧಕರ ಪಟ್ಟಿ’ಯಲ್ಲಿ ಇವರನ್ನು ಹೆಸರಿಸಲಾಗಿದೆ. ಅಲ್ಲದೇ ಕರ್ನಾಟಕ ವಿಚಾರವಾದಿ ವೇದಿಕೆಯು 2021ನೇ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇವರು ಮೃದು ಸ್ವಭಾವದ ಲೇಖಕರು. ಅಲ್ಲಮ ಪ್ರಭುದೇವರ ಮಾತಿನಲ್ಲಿ ಹೇಳುವುದಾದರೆ, ಅವರು ಅನಗತ್ಯ ಮಾತುಗಳನ್ನಾಡಿ, “ನುಡಿದು ಸೂತಕಿಗಳಾಗದ” ವ್ಯಕ್ತಿ. ಮಹಾಕವಿ ಪಂಪನಂತೆ “ಹಿತಮಿತ ಮೃದುವಚನ”ಕಾರರು. ಬುದ್ಧರ ವಿಚಾರಗಳಿಂದ ಸಂಸ್ಕರಿಸಲ್ಪಟ್ಟ ಸಮದರ್ಶಿತ್ವದ ವ್ಯಕ್ತಿತ್ವ ಅವರದು. ಅವರ ಬರಹಗಳಲ್ಲಿ ಬಾಹ್ಯವಾಗಿ ನಾವು ಆಕ್ರೋಶ-ಆವೇಶಗಳನ್ನು ಕಾಣಲಾಗುವುದಿಲ್ಲ. ದಲಿತ-ಬಂಡಾಯ ಸಾಹಿತ್ಯ ಪಂಥದ ಎಷ್ಟೋ ಕವಿಗಳಲ್ಲಿ ಉಕ್ಕಿ ಹರಿಯುವ ಸಿಟ್ಟು-ಸೆಡೆವುಗಳನ್ನು ನಾವು ಇವರಲ್ಲಿ ಬಹಿರಂಗವಾಗಿ ಕಾಣಲು ಕಷ್ಟ. ಆದರೆ ಇವರ ಬರಹ ಮಾತ್ರ ಅತ್ಯಂತ ಶಕ್ತಿಶಾಲಿಯಾದುದು. ಓದುಗರಲ್ಲಿ ಅರಿವಿನ ಕಿಚ್ಚನ್ನು, ಕ್ರಾಂತಿಯ ಕಿಚ್ಚನ್ನು ಬಹಳ ಆಳದಿಂದ ಉಕ್ಕಿಸಬಲ್ಲದು. ಎಂತಹವರನ್ನೂ ಗಂಭೀರವಾಗಿ ಚಿಂತಿಸುವಂತೆ ಮಾಡಬಲ್ಲದು. ಇಂದಿಗೂ ದೇಶದಾದ್ಯಂತ ಪ್ರತಿನಿತ್ಯ ಒಂದಲ್ಲ ಒಂದು ಕಡೆ ದಲಿತರ ಮೇಲೆ, ಮಹಿಳೆಯರ ಮೇಲೆ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ಭೀಕರ ದೌರ್ಜನ್ಯಗಳ ಬಗ್ಗೆ ಅಪಾರವಾದ ಕಿಚ್ಚನ್ನು, ಸಂಕಟ-ತಳಮಳಗಳನ್ನು ಜ್ವಾಲಾಮುಖಿಯಂತೆ ತಮ್ಮ ಒಡಲಲ್ಲಿ ತುಂಬಿಕೊಂಡಿರುವ ಮೂಡ್ನಾಕೂಡು ಚಿನ್ನಸ್ವಾಮಿಯವರು, ಶಾಂತಭಾವದಿಂದಲೇ ಈ ದೌರ್ಜನ್ಯ-ದಬ್ಬಾಳಿಕೆಗಳಿಗೆಲ್ಲ ಪ್ರತಿಭಟಿಸುವವರು ಹಾಗೂ ಪರಿಹಾರವನ್ನು ಸೂಚಿಸಬಲ್ಲವರು.

ಇದನ್ನು ಹಲವು ವಿಮರ್ಶಕರು, ವಿದ್ವಾಂಸರು ಈಗಾಗಲೇ ಗುರುತಿಸಿದ್ದಾರೆ. ಈ ವಿಚಾರದಲ್ಲಿ ದೇವನೂರ ಮಹಾದೇವ ಹಾಗು ಮೂಡ್ನಾಕೂಡು ಚಿನ್ನಸ್ವಾಮಿಯರ ಬರಹಗಳು ಒಂದೆ. ಅವು ಯಾರನ್ನೂ, ವಿಶೇಷವಾಗಿ ಸವರ್ಣೀಯರನ್ನು ಕೆರಳಿಸುವುದಿಲ್ಲ. ಆದರೆ ಗಂಭೀರ ಚಿಂತನೆಗೆ ಹಚ್ಚುತ್ತವೆ. ಇವರೊಳಗಿನ ಕಿಚ್ಚು-ಆಕ್ರೋಶ ಕಣ್ಣಿಗೆ ರಾಚುವುದಿಲ್ಲ-ಆದರೆ ಎಂತಹ ಕಟುಕರ ಮನಸ್ಸನ್ನೂ ಕಲಕುತ್ತವೆ. ಆಕ್ರೋಶ ಭರಿತರಾಗಿ ನಾವು ಬರೆದು-ಮಾತನಾಡಿ ಶೋಷಿತರಲ್ಲಿ ಹುಟ್ಟಿಸುವ ಕೋಪ-ತಾಪಗಳು ಶಾಶ್ವತವಲ್ಲ, ಅದು ತಾತ್ಕಾಲಿಕ ಮತ್ತು ಅದು ಅಷ್ಟು ಪ್ರಯೋಜನಕಾರಿಯೂ ಅಲ್ಲ. ಆದರೆ ಅದೇ ಶೋಷಿತ ಹಾಗು ಶೋಷಕ ಇಬ್ಬರನ್ನೂ ಗಂಭೀರ ಚಿಂತನೆಗೆ ಹಚ್ಚುವುದು. ಅವರನ್ನು ಒಳಗಿಂದಲೇ ಪರಿವರ್ತಿಸುವುದು ಮುಖ್ಯ. ಈ ನೆಲೆಯ ಸಾಹಿತ್ಯ ಮೂಡ್ನಾಕೂಡು ಅವರದು.

ದಲಿತ ಬಂಡಾಯ ಸಾಹಿತ್ಯ ಬಹುತೇಕ ಮಾಕ್ರ್ಸ್‍ವಾದಿ ವಿಚಾರಗಳಿಂದ ಪ್ರಭಾವಿತವಾದುದು ಹಾಗು ದಲಿತರ ಹಲವು ಜ್ವಲಂತ ಸಮಸ್ಯೆಗಳಿಗೆ ಮಾಕ್ರ್ಸ್‍ವಾದಿ ಹಿನ್ನೆಲೆಯಲ್ಲೇ ಪರಿಹಾರ ಸೂಚಿಸುತ್ತದೆ – ಎಂದು ಬಹಳಷ್ಟು ಜನ ವಾದಿಸುತ್ತಾರೆ. ನಾವೂ ಕೂಡ ಬಹುಜನ ಚಳವಳಿಯ ಬಹಳಷ್ಟು ವೇದಿಕೆಗಳಲ್ಲಿ “ದಲಿತ-ಬಂಡಾಯ ಸಾಹಿತಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಭಾವನಾತ್ಮಕವಾಗಿ ಗೌರವಿಸುತ್ತಾರೆ. ಎಲ್ಲ ಕಾರ್ಯಕ್ರಮಗಳಲ್ಲಿ, ಹೋರಾಟಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟುಕೊಳ್ಳುತ್ತಾರೆ. ಆದರೆ ಅನುಸರಿಸುವುದು ಮಾತ್ರ ಮಾಕ್ರ್ಸ್‍ವಾದವನ್ನು. ದಲಿತರ-ಶೋಷಿತರ ವಿಮೋಚನೆಯ ವಿಚಾರದಲ್ಲಿ ಅವರು ಡಾ. ಬಿ ಆರ್ ಅಂಬೇಡ್ಕರರನ್ನು, ಗೌತಮ ಬುದ್ಧರನ್ನು ಮಾದರಿಯಾಗಿ ತೆಗೆದುಕೊಳ್ಳುವುದಿಲ್ಲ” ಎಂದು ಟೀಕಿಸಿ ಮಾತನಾಡಿದ್ದೇವೆ. ನನ್ನ ಪಿ.ಎಚ್.ಡಿ ಪ್ರಬಂಧದಲ್ಲಿ (ಕನ್ನಡ ದಲಿತ ಸಾಹಿತ್ಯ ಮತ್ತು ಅಂಬೇಡ್ಕರ್‍ವಾದ) ಕೂಡ ಇದೇ ಅಂಶದ ಬಗ್ಗೆ ಹೆಚ್ಚು ಬರೆದಿದ್ದೇನೆ. ಅಸ್ಪøಶ್ಯರು ಯಾರು ? ಅವರೇಕೆ ಅಸ್ಪøಶ್ಯರಾದರು ? ಎಂಬ ಪ್ರಶ್ನೆಗಳಿಗೆ ದಲಿತ ಬಂಡಾಯ ಸಾಹಿತಿಗಳು ಜನಪದ ಹಾಗು ಪುರಾಣಗಳಲ್ಲಿ ಉತ್ತರ ಹುಡುಕುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ ಈ ಬಗ್ಗೆ ಹೇಳಿರುವ, ಸಂಶೋಧಿಸಿರುವ ವಿಚಾರಗಳನ್ನು ದಲಿತ-ಬಂಡಾಯ ಸಾಹಿತ್ಯ ಒಂದು Souಡಿse ಆಗಿ ತೆಗೆದುಕೊಳ್ಳಲಿಲ್ಲ. ಹಾಗಾಗಿಯೇ ದಲಿತರ ವಿಮೋಚನೆಗೆ ಒಂದು ಶಾಶ್ವತ ಪರಿಹಾರವನ್ನು ಸೂಚಿಸಲಾಗಲಿಲ್ಲ. ದಲಿತ ಚಳವಳಿ ಐವತ್ತು ವರ್ಷ ಪೂರೈಸಿದ್ದರೂ, ಇನ್ನೂ ದಲಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಲಾಗಲಿಲ್ಲ. ದಲಿತ ಬಂಡಾಯ ಸಾಹಿತಿಗಳು ಮಲೆಮಾದೇಶ್ವರ, ಮಂಟೇಸ್ವಾಮಿ, ಎತ್ತಪ್ಪ, ಜುಂಜಪ್ಪ, ಬಕಾಲಮುನಿ, ಮೈಲಾರಲಿಂಗ-ಇಂತಹ ತಳವರ್ಗದ ಸಾಂಸ್ಕøತಿಕ ನಾಯಕರ ಅಧ್ಯಯನಕ್ಕೆ ಕೊಟ್ಟ ಒತ್ತನ್ನು ಗೌತಮ ಬುದ್ಧ, ಜ್ಯೋತಿಬಾಪುಲೆ, ಡಾ. ಬಿ ಆರ್ ಅಂಬೇಡ್ಕರ್ ರ ಅಧ್ಯಯನಕ್ಕೆ ಕೊಡಲಿಲ್ಲ-ಎಂದೆಲ್ಲ ನಾವು ಸುಮಾರು 15-20 ವರ್ಷಗಳಿಂದಲೂ ಬಹುಜನ ಚಳವಳಿಯ ವೇದಿಕೆಗಳಲ್ಲಿ, ಶಿಬಿರಗಳಲ್ಲಿ ಮಾತನಾಡಿದ್ದೇವೆ, ಚರ್ಚಿಸಿದ್ದೇವೆ.

ಆದರೆ ನಮ್ಮ ಎಲ್ಲ ಮಾತುಗಳಿಗೆ ಅಪವಾದ ಎಂಬಂತಿದೆ ಮೂಡ್ನಾಕೂಡು ಅವರ ಸಾಹಿತ್ಯ! ಮೂಡ್ನಾಕೂಡು ಚಿನ್ನಸ್ವಾಮಿಯವರು ಬೇರೆಲ್ಲ ದಲಿತ-ಬಂಡಾಯ ಸಾಹಿತಿಗಳಿಗಿಂತ ಹೆಚ್ಚು ಅಂಬೇಡ್ಕರ್‍ವಾದಿ ಹಾಗು ಬೌದ್ಧವಾದಿ. (ದಲಿತ-ಬಂಡಾಯ ಪಂಥದ ಮಹತ್ವದ ಕವಿಗಳಾದ ಪ್ರೊ. ಅರವಿಂದ ಮಾಲಗತ್ತಿಯವರ ಸಾಹಿತ್ಯ ಹಾಗು ಮ.ನ ಜವರಯ್ಯನವರ ಸಾಹಿತ್ಯ ಹೆಚ್ಚು ಅಂಬೇಡ್ಕರ್‍ವಾದಿಯಾದುದು ಎಂದು ನಾನು ನನ್ನ ಪಿ.ಎಚ್.ಡಿ ಗ್ರಂಥದಲ್ಲಿ ಗುರುತಿಸಿದ್ದೇನೆ.) ಈ ವಿಚಾರದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರ ನಿಲುವು ಬಹಳ ಸ್ಪಷ್ಟ. ಇದನ್ನು ನಾವು ಅರಿಯಬೇಕಾದರೆ ಅವರ “ಬಹುತ್ವದ ಭಾರತ ಹಾಗು ಬೌದ್ಧ ತಾತ್ವಿಕತೆ” ಎಂಬ ಕೃತಿಯನ್ನು ನೋಡಬೇಕು. ಅಂಬೇಡ್ಕರ್‍ರ ಬಗ್ಗೆ, ಬುದ್ಧನ ಬಗ್ಗೆ, ಅಷ್ಟೇಅಲ್ಲ, ಬಸವಾದಿ ಶರಣರ ಬಗ್ಗೆ ಅವರಿಗೆಷ್ಟು ಸ್ಪಷ್ಟತೆ ಇದೆ ಎಂಬುದು ಇಲ್ಲಿನ ಬಹಳಷ್ಟು ಲೇಖನಗಳಲ್ಲಿ ನಮಗೆ ಅರಿವಾಗುತ್ತದೆ. ಅಲ್ಲದೆ, ಅವರು ಇತ್ತೀಚೆಗೆ “ಧಮ್ಮಯಾನ” ಎಂಬ ಅದ್ಭುತ ಕೃತಿಯೊಂದನ್ನು ಪ್ರಕಟಿಸಿದ್ದಾರೆ. ಗೌತಮ ಬುದ್ಧರ ಜನನ — ಬಾಲ್ಯ -– ಯೌವ್ವನ ಹಾಗೂ ಅವರ ಧಮ್ಮ ವಿಚಾರಗಳನ್ನು ಒಳಗೊಂಡ ಪರಿಪೂರ್ಣ ಕೃತಿ ಅದು. ಇಂಗ್ಲೀಷ್‍ನಲ್ಲಿರುವ ಬಾಬಾ ಸಾಹೇಬರ “ಬುದ್ಧ ಮತ್ತು ಆತನ ಧಮ್ಮ (Buddha and his Dhamma)” ಕೃತಿಯನ್ನು ಹೋಲುವ “ಧಮ್ಮಯಾನ”ವು ಕನ್ನಡದಲ್ಲಿ ಅತ್ಯಂತ ಅಧಿಕೃತವಾದ (Authoritative) ಬೌದ್ಧ ಗ್ರಂಥವಾಗಿದೆ. ಬುದ್ಧನ ಬಗ್ಗೆ, ಆತನ ವಿಚಾರಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡುವುದು ಸುಲಭವಲ್ಲ. ಒಬ್ಬ Enlighten ವ್ಯಕ್ತಿಯ ವಿಚಾರಗಳನ್ನು ಇನ್ನೊಬ್ಬ ಇಟಿಟighಣeಟಿ ವ್ಯಕ್ತಿಯೇ ಅರ್ಥೈಸಲು, ವಿಶ್ಲೇಷಿಸಲು ಸಾಧ್ಯ. ಈ ವಿಚಾರದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರದು Enlighten ಆಗಿರುವಂತಹ ವ್ಯಕ್ತಿತ್ವ ಎಂದು ಹೇಳಿದರೆ ಬಹುಶಃ ಅತಿಶಯೋಕ್ತಿಯಾಗಲಾರದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ