ಪೊಲೀಸ್ ವಾಹನಕ್ಕೆ ₹18,250 ರೂ. ದಂಡ: 71 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್
ಮೈಸೂರು: ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಪಾಠ ಮಾಡುವ, ನಿಯಮ ಉಲ್ಲಂಘಿಸುವ ಸವಾರರನ್ನು ಹಿಡಿದು ದಂಡ ಹಾಕುವ ಪೊಲೀಸ್ ಇಲಾಖೆಯ ವಾಹನವೊಂದೇ ಬರೋಬ್ಬರಿ 71 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವ ಶಾಕಿಂಗ್ ಘಟನೆಯೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಮೈಸೂರು ನಗರ ಪೊಲೀಸ್ ಇಲಾಖೆಯ ‘112’ ತುರ್ತು ಸೇವೆ ಹಾಗೂ ಗಸ್ತು ತಿರುಗಲು ಬಳಸುವ ಇಲಾಖೆಯ ವಾಹನ (ನೋಂದಣಿ ಸಂಖ್ಯೆ: ಕೆಎ–55-ಜಿ–0433) ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವುದನ್ನು ವಕೀಲರೊಬ್ಬರು ಪತ್ತೆ ಹಚ್ಚಿ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
23 ತಿಂಗಳಲ್ಲಿ 71 ಬಾರಿ ಉಲ್ಲಂಘನೆ:
ಕಳೆದ 2024ರ ಜುಲೈ 5 ರಿಂದ 2026ರ ಜೂನ್ 10ರ ವರೆಗಿನ 23 ತಿಂಗಳ ಅವಧಿಯಲ್ಲಿ ಈ ಪೊಲೀಸ್ ಗಸ್ತು ವಾಹನವು ಒಟ್ಟು 71 ಬಾರಿ ನಿಯಮ ಉಲ್ಲಂಘಿಸಿದೆ. ಈ ಎಲ್ಲಾ ಪ್ರಕರಣಗಳು ‘ಸೀಟ್ ಬೆಲ್ಟ್ ಧರಿಸದೇ ಇರುವುದಕ್ಕೆ’ ದಾಖಲಾಗಿವೆ. ಸದ್ಯ ಸರ್ಕಾರ ನೀಡಿರುವ ಶೇ. 50ರಷ್ಟು ದಂಡ ರಿಯಾಯಿತಿಯನ್ನು ಅನ್ವಯಿಸಿದರೂ ಸಹ, ಈ ವಾಹನ ಇನ್ನೂ 18,250 ರೂಪಾಯಿ ಬಾಕಿ ದಂಡ ಪಾವತಿಸಬೇಕಾಗಿದೆ.
ನಗರದ ದೊಡ್ಡ ಗಡಿಯಾರ ನ್ಯೂಕೋರ್ಟ್ ಕಾಂಪ್ಲೆಕ್ಸ್, ಕುವೆಂಪು ನಗರ, ಸಯ್ಯಾಜಿರಾವ್ ರಸ್ತೆ, ಜೆ.ಕೆ. ಮೈದಾನ ಮತ್ತು ಉದಯಗಿರಿ ವೃತ್ತಗಳಲ್ಲಿ ಅಳವಡಿಸಲಾಗಿರುವ ಇಂಟಿಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಮ್ (ITMS) ಕ್ಯಾಮೆರಾಗಳಲ್ಲಿ ಈ ನಿಯಮ ಉಲ್ಲಂಘನೆಗಳು ಸರಣಿಯಾಗಿ ಸೆರೆಯಾಗಿವೆ.
ಕಾನೂನು ಎಲ್ಲರಿಗೂ ಒಂದೇ ಎಂದ ಡಿಸಿಪಿ:
ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಡಿಸಿಪಿ ಸುಂದರ್ ರಾಜ್ ಅವರು, “ಸಂಚಾರ ನಿಯಮಗಳು ಮತ್ತು ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ. ನಿಯಮ ಉಲ್ಲಂಘನೆಯನ್ನು ಯಾರೇ ಮಾಡಿದರೂ ಅದು ತಪ್ಪೇ. ಸಾಮಾನ್ಯವಾಗಿ ಸರ್ಕಾರಿ ಕಾರಿನ ಹಿಂಬದಿ ಸೀಟ್ನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಅಥವಾ ವಿಐಪಿಗಳ ಬದಲು, ವಾಹನ ಚಲಾಯಿಸುವ ಚಾಲಕರೇ ಈ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸಬೇಕಾಗುತ್ತದೆ. ಸದ್ಯ ಈ ‘112’ ಗಸ್ತು ವಾಹನದ ಮೇಲಿರುವ ಪ್ರಕರಣಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD





























