ಪ್ರೌಢಶಾಲೆಯೊಂದರ 26 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ - Mahanayaka

ಪ್ರೌಢಶಾಲೆಯೊಂದರ 26 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ

covid
03/04/2021

ಚಿಕ್ಕಮಗಳೂರು: ನಗರದ ಸರ್ಕಾರಿ ಪ್ರೌಢಶಾಲೆಯೊಂದರ 26 ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಇಂದು 47 ಪ್ರಕರಣಗಳು ಬೆಳಕಿಗೆ ಬಂದಿದ್ದು ಅದರಲ್ಲಿ 26 ವಿದ್ಯಾರ್ಥಿನಿಯರಿಗೆ ಸೋಂಕು ಇರುವುದು ದೃಢಪಟ್ಟಿದ್ದು ಜನ ಗಾಬರಿಗೊಳ್ಳುವಂತೆ ಮಾಡಿದೆ. ಬಸವನಹಳ್ಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ ಯೊಬ್ಬರಿಗೆ ಮೂರು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದರಿಂದ ಪೋಷಕರು ಮಗಳನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಪ್ರಿನ್ಸಿಪಾಲರಿಗೆ ವಿಷಯ ತಿಳಿಸಿದ್ದರು.

ಶಾಲೆಯ 591 ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಗಂಟಲು ದ್ರವದ ಮಾದರಿಯನ್ನು ಆರೋಗ್ಯ ಇಲಾಖೆಯವರು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ. ಶಾಲೆಯನ್ನು ಸ್ಯಾನಿಟೈಸರ್ ಮಾಡಲಾಯಿತು.

ಸಂಗ್ರಹಿಸಿದ ಮಾದರಿಗಳಲ್ಲಿ ಕೆಲವು ವಿದ್ಯಾರ್ಥಿಗಳ ಪ್ರಯೋಗಾಲಯದ ಪಲಿತಾಂಶ ಹೊರ ಬಂದಿದ್ದು, 26 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಶೃಂಗೇರಿ ವಸತಿ ಶಾಲೆಯ ಮೂವರು ವಿದ್ಯಾರ್ಥಿನಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 204 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 14,347 ಜನರಿಗೆ ಸೋಂಕು ತಗಲಿದ್ದು 13,993 ಜನರು ಗುಣಮುಖರಾಗಿದ್ದಾರೆ. 141 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ