ಪ್ರವೀಣ್ ಹತ್ಯೆ ಪ್ರಮುಖ ಆರೋಪಿಗಳ ಫೋಟೋ, ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ: ಎಡಿಜಿಪಿ ಅಲೋಕ್ ಕುಮಾರ್ - Mahanayaka

ಪ್ರವೀಣ್ ಹತ್ಯೆ ಪ್ರಮುಖ ಆರೋಪಿಗಳ ಫೋಟೋ, ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ: ಎಡಿಜಿಪಿ ಅಲೋಕ್ ಕುಮಾರ್

adgp alok kumar
10/08/2022

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬೆಳ್ಳಾರೆಯಲ್ಲಿ  ಆರು ಜಿಲ್ಲೆಯ ಎಸ್ಪಿ,ಎನ್ ಐ ಎ ಅಧಿಕಾರಿಗಳೊಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಪ್ರಮುಖ ಸಭೆ ನಡೆಸಿದರು.

ಸಭೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ ನಲ್ಲಿ ಮುಖ್ಯ ಆರೋಪಿಗಳ ಬಂಧನ ಆಗಬೇಕಿದೆ. ಆರೋಪಿಗಳ ದಸ್ತಗಿರಿಗೆ ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳ ಸಭೆ ಮಾಡುತ್ತೇವೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಿದ್ದೇವೆ. ಮಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಭೆ ಮಾಡುತ್ತೇವೆ ಎಂದು ತಿಳಿಸಿದರು.

ಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ಮಾಡಿದವರಿಗೂ ಕ್ರಮ ಆಗಲಿದೆ. ಎನ್ ಐ ಎ ಅಧಿಕಾರಿಗಳ‌ ಜೊತೆ ಸೇರಿ ಕ್ರಮ ಜರುಗಿಸುತ್ತೇವೆ. ಕೋರ್ಟ್ ಮೂಲಕ ವಾರೆಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಎನ್ ಐ ಎ ಅಧಿಕಾರಿಗಳ ಜೊತೆ ಕರ್ನಾಟಕ ತಂಡ ಈ ಕೆಲಸ ಮಾಡಲಿದೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ. ಅವರ ಫೋಟೋ, ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ ಎಂದು ತಿಳಿಸಿದರು.

ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆವಾಗವಾಗ ಅವರ ಸ್ಥಳಬದಲಾವಣೆ ಮಾಡಲಾಗುತ್ತಿದೆ. ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆ ಎಂದು ತಿಳಿಸಿದರು.

ಆರೋಪಿಗಳಿಗೆ ಪಿಎಫ್ ಐ ಲಿಂಕ್ ಇದೆಯಾ  ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ನಾವು ಯಾವುದೇ ದಾಖಲೆ ಇಲ್ಲದೇ ಮಾತನಾಡೋದಿಲ್ಲ. ದಾಖಲೆ ಜೊತೆಗೆ ಮಾತನಾಡುತ್ತೇವೆ. ಸುಮ್ಮನೆ ಏನನ್ನೂ ಹೇಳೋದಿಲ್ಲ. ಕೆಲವು ಆರೋಪಿಗಳಿಗೆ ಪಿಎಫ್ ಐ ಲಿಂಕ್ ಇದೆ. ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ. ತನಿಖೆಯ ಬಳಿಕ ಯಾರಿಗೆಲ್ಲಾ ಪಿಎಫ್ ಐ ಲಿಂಕ್ ಇದೆ ಎಂಬುವುದರ ಬಗ್ಗೆ ಹೇಳುತ್ತೇವೆ. ಈಗಾಗಲೇ ಪ್ರಕರಣ ತನಿಖೆಯ ಹಂತದಲ್ಲಿದೆ ಎಂದರು.

ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ ಆಗಿದ್ದಾರೆ. ಅವರಿಗೆ ನಿರ್ದೇಶನ ಕೊಟ್ಟಿರೋದು ಯಾರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಬೆಳ್ಳಾರೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಸಭೆಯನ್ನು ಮಾಡುತ್ತೇವೆ. ಮಂಡ್ಯ,ಚಾಮರಾಜನಗರ ಹಾಸನ,ಚಿಕ್ಕಮಗಳೂರು, ಉಡುಪಿ,ದಕ್ಷಿಣ ಕನ್ನಡ ಎಸ್ಪಿಗಳ ಜೊತೆ ಸಭೆ ಮಾಡುತ್ತೇವೆ ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ