ಮಂಗಳೂರು: ಪಾಲಿಕೆ ವಾಹನಗಳಿಗೆ ಅಡ್ಡನಿಂತು ಸಂಡೆ ಬಜಾರ್ ವ್ಯಾಪಾರಿಗಳಿಂದ ಪ್ರತಿಭಟನೆ - Mahanayaka

ಮಂಗಳೂರು: ಪಾಲಿಕೆ ವಾಹನಗಳಿಗೆ ಅಡ್ಡನಿಂತು ಸಂಡೆ ಬಜಾರ್ ವ್ಯಾಪಾರಿಗಳಿಂದ ಪ್ರತಿಭಟನೆ

Sunday bazaar.jpg
15/06/2026

ಮಂಗಳೂರು: ನಗರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸಂಡೆ ಬಜಾರ್ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಮುಂದಾದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಬೀದಿಬದಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಾಲಿಕೆ ಲಾರಿಗಳ ಎದುರೇ ಕುಳಿತು ಪ್ರತಿಭಟನೆ ನಡೆಸಿ ಕಾರ್ಯಾಚರಣೆಯನ್ನು ವಿಫಲಗೊಳಿಸಿದ ಘಟನೆ ನಡೆದಿದೆ.

ಭಾನುವಾರ ನಗರಪಾಲಿಕೆ ಅಧಿಕಾರಿಗಳು ಬಡ ಬೀದಿಬದಿ ವ್ಯಾಪಾರಿಗಳ ಸರಕು–ಸರಂಜಾಮುಗಳನ್ನು ವಶಪಡಿಸಿಕೊಳ್ಳಲು ಲಾರಿಗಳೊಂದಿಗೆ ಧಾವಿಸುತ್ತಿದ್ದಂತೆ ಸಂಘಟಿತರಾದ ವ್ಯಾಪಾರಿಗಳು, ಪಾಲಿಕೆ ವಾಹನಗಳಿಗೆ ಅಡ್ಡಲಾಗಿ ಕುಳಿತು ಆಕ್ರೋಶ ಹೊರಹಾಕಿದರು. ನಗರ ಪಾಲಿಕೆಯು ಬೀದಿಬದಿ ವ್ಯಾಪಾರದ ನಿಯಮಾವಳಿಗಳಿಗೆ ಅನುಗುಣವಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದರು. ವ್ಯಾಪಾರಿಗಳ ಈ ಧಿಡೀರ್ ಮತ್ತು ಒಗ್ಗಟ್ಟಿನ ಪ್ರತಿಭಟನೆಯಿಂದಾಗಿ ಅಧಿಕಾರಿಗಳು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹಿಂತಿರುಗಬೇಕಾಯಿತು.

ಈ ತೀವ್ರ ಪ್ರತಿಭಟನೆಯ ನೇತೃತ್ವವನ್ನು ಬೀದಿಬದಿ ವ್ಯಾಪಾರಸ್ಥರ ಸಂಘಟನೆಗಳ ಪ್ರಮುಖರಾದ ಅಬ್ದುಲ್ ರಹಿಮಾನ್, ಸಂತೋಷ್ ಆರ್. ಎಸ್., ಮುಜಾಫರ್ ಅಹ್ಮದ್, ಮೊಹಮ್ಮದ್ ಮುಸ್ತಫಾ, ವಿಜಯ್ ಜೈನ್, ಎಂ. ಎನ್. ಶಿವಪ್ಪ, ನೌಶಾದ್ ಉಳ್ಳಾಲ ಹಾಗೂ ಹಂಝ ಮೊಹಮ್ಮದ್ ಸೇರಿದಂತೆ ಹಲವರು ವಹಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಮುಖಂಡರಾದ ಬಿ.ಕೆ. ಇಮ್ತಿಯಾಜ್ ಅವರು, ಪಾಲಿಕೆಯ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮಂಗಳೂರು ನಗರದಲ್ಲಿ ಸಂಡೆ ಬಜಾರ್ ಇವತ್ತಿನದಲ್ಲ, ಕಳೆದ 50 ವರ್ಷಗಳ ಇತಿಹಾಸದಿಂದಲೂ ನಡೆದುಕೊಂಡು ಬರುತ್ತಿದೆ. ಇಂದು ಬೀದಿಬದಿ ವ್ಯಾಪಾರಿಗಳು ತೋರಿದ ಐಕ್ಯತೆ ಮತ್ತು ಬದ್ಧತೆಯೇ ಪಾಲಿಕೆಯ ನಿಯಮಬಾಹಿರ ಕಾರ್ಯಾಚರಣೆ ವಿಫಲಗೊಳ್ಳಲು ಕಾರಣ. ನಗರ ಪಾಲಿಕೆಯು ಈ ರೀತಿ ಏಕಪಕ್ಷೀಯವಾಗಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಬಾರದು. ಮೊದಲು ವ್ಯಾಪಾರಿಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿ. ಅದನ್ನು ಬಿಟ್ಟು ಇಂತಹ ಕಾರ್ಯಾಚರಣೆ ನಡೆಸುವುದು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ” ಎಂದು ಅವರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ