ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಗೆ ಡಿಕ್ಕಿ ಹೊಡೆದ ಕಾರು | ದೃಶ್ಯ ನೋಡಿ ಬೆಚ್ಚಿಬಿದ್ದ ಮಂಗಳೂರಿಗರು!
ಮಂಗಳೂರು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ಬಳಿಯಲ್ಲಿ ನಡೆದಿದ್ದು, ಘಟನೆಯ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ.
ನಿವೃತ್ತ ಸರ್ಕಾರಿ ಅಧಿಕಾರಿ 62 ವರ್ಷ ವಯಸ್ಸಿನ ಎ.ಆನಂದ್ ಮೃತಪಟ್ಟವರಾಗಿದ್ದಾರೆ. ಇವರು ಲೇಡಿಹಿಲ್ ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಎಸ್ಸೆನ್ನೆಲ್ ಅಧಿಕಾರಿಯಾಗಿದ್ದ ಆನಂದ್ ಅವರು ನಿವೃತ್ತಿಯ ಬಳಿಕ ಉಡುಪಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ನಿನ್ನೆ ರಾತ್ರಿ ಕಂಪೆನಿಯ ಮೀಟಿಂಗ್ ನಲ್ಲಿ ಭಾಗವಹಿಸಿದ ಬಳಿಕ ಅವರು ಮಂಗಳೂರಿಗೆ ಮರಳಿದ್ದು, ಬಸ್ ನಿಂದ ಇಳಿದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಕಾರೊಂದು ಅತೀ ವೇಗ ಮತ್ತು ಅಜಾಗರೋಕತೆಯ ಚಾಲನೆಯಿಂದ ಬಂದು ಡಿಕ್ಕಿ ಹೊಡೆದಿದೆ.
ಸರ್ಕಾರಿ ಇಲಾಖೆಯೊಂದರಲ್ಲಿ ಎಇಇ ಆಗಿದ್ದ ಷಣ್ಮುಗಂ ಎಂಬಾತ ಕಾರು ಚಾಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೇ ಆರೋಪಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನೂ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಆರೋಪಿ ಕಾರನ್ನು ಬೆನ್ನಟ್ಟಿ ತಡೆ ಹಾಕಿ ಹಿಡಿದಿದ್ದು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತ ಆನಂದ ಅವರ ಪತ್ನಿ ನೀಡಿದ ದೂರಿನಂತೆ ಆರೋಪಿ ಷಣ್ಮುಗಂ ವಿರುದ್ಧ ಕದ್ರಿ ಠಾಣಾ ಸಂಚಾರಿ ಪೊಲೀಸರು ವಿವಿಧ ಕಾಯ್ದೆಗಳಡಿಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.