ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಶೀಘ್ರದಲ್ಲಿಯೇ ಸಂಬಂಧ ಸ್ಥಾಪನೆ: ಟ್ರಂಪ್ ಹೇಳಿಕೆ - Mahanayaka
5:05 PM Saturday 8 - February 2025

ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಶೀಘ್ರದಲ್ಲಿಯೇ ಸಂಬಂಧ ಸ್ಥಾಪನೆ: ಟ್ರಂಪ್ ಹೇಳಿಕೆ

28/01/2025

ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಶೀಘ್ರದಲ್ಲಿಯೇ ಸಂಬಂಧ ಸ್ಥಾಪನೆಯಾಗಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ 600 ಬಿಲಿಯನ್ ಹೂಡಿಕೆ ಮಾಡುವುದಾಗಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಘೋಷಿಸಿರುವುದರ ನಡುವೆಯೇ ಟ್ರಂಪ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಸೌದಿ ಮತ್ತು ಇಸ್ರೇಲ್ ನಡುವೆ ಸಂಬಂಧ ಸ್ಥಾಪಿಸುವುದಕ್ಕೆ ರಂಗ ಸಿದ್ದಗೊಂಡಿದ್ದ ಸಮಯದಲ್ಲೇ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು. ಆ ಬಳಿಕ ಗಾಝಾದ ಮೇಲೆ ಇಸ್ರೇಲ್ ದಾಳಿ ಪ್ರಾರಂಭಿಸಿತು. ಆ ಬಳಿಕ ಸೌದಿ ಮತ್ತು ಇಸ್ರೇಲ್ ನಡುವಿನ ಸಂಬಂಧ ವೃದ್ಧಿ ನೆನೆಗುದಿಗೆ ಬಿತ್ತು.

ಬಳಿಕ ಫೆಲೆಸ್ತೀನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವುದರೊಂದಿಗೆ ಫೆಲಸ್ತೀನಿಯರಿಗೆ ಸ್ವತಂತ್ರ ರಾಷ್ಟ್ರ ಸಿಗದೇ ಇಸ್ರೇಲ್ ನೊಂದಿಗೆ ಯಾವುದೇ ಸಂಬಂಧ ಸಾಧ್ಯವಿಲ್ಲ ಎಂದು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದರು. ಇದೀಗ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುವುದರೊಂದಿಗೆ ಸೌದಿ ಅರೇಬಿಯ ಮತ್ತು ಇಸ್ರೇಲ್ ನಡುವಿನ ಸಂಬಂಧ ಮತ್ತೆ ಚರ್ಚೆಗೆ ಬಂದಿದೆ.

ಜೆರುಸಲೇಮನ್ನು ಕೇಂದ್ರವಾಗಿಸಿಕೊಂಡು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಿಸುವ ಬೇಡಿಕೆಯನ್ನು ಅಂಗೀಕರಿಸಿದರೆ ಮಾತ್ರ ಇಸ್ರೇಲ್ ಜೊತೆಗೆ ಸಂಬಂಧ ಸ್ಥಾಪಿಸಬಹುದು ಎಂಬುದು ಸೌದಿ ಅರೇಬಿಯಾದ ನಿಲುವಾಗಿದೆ. ಆದರೆ ಈವರೆಗೆ ಇಸ್ರೇಲ್ ಈ ಬೇಡಿಕೆಯನ್ನು ಅಂಗೀಕರಿಸಿಲ್ಲ. ಆದ್ದರಿಂದಲೇ ಇದೀಗ ಟ್ರಂಪ್ ಅವರ ನಿಲುವು ಮುಖ್ಯವಾಗಲಿದೆ. ಅವರು ಸೌದಿಯೊಂದಿಗೆ ದೊಡ್ಡ ಮಟ್ಟದಲ್ಲಿ ಬಿಸಿನೆಸ್ ನಲ್ಲಿಯೂ ಭಾಗಿಯಾಗಿದ್ದಾರೆ .
ಈ ಹಿಂದೆ ಮೊದಲ ಬಾರಿ ಅಧ್ಯಕ್ಷರಾದಾಗ ಟ್ರಂಪ್ ಅವರು ತನ್ನ ಮೊದಲ ಭೇಟಿಯನ್ನ ಸೌದಿ ಅರೇಬಿಯಾಕ್ಕೆ ನೀಡಿದ್ದರು. ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ತಮ್ಮ ಮೊದಲ ಭೇಟಿಯನ್ನ ಬ್ರಿಟನ್ನಿಗೆ ನೀಡುವುದು ರೂಢಿ. ಈ ಹಿಂದಿನ ಸೌದಿ ಭೇಟಿಯಲ್ಲಿ 450 ಬಿಲಿಯನ್ ಅಮೆರಿಕನ್ ಡಾಲರ್ ನ ಒಪ್ಪಂದವನ್ನ ಸೌದಿ ಅರೇಬಿಯಾದೊಂದಿಗೆ ಟ್ರಂಪ್ ಮಾಡಿಕೊಂಡಿದ್ದರು. ಈ ಬಾರಿ ಅಂಥದ್ದೇ ಒಪ್ಪಂದವನ್ನು ಮಾಡಿಕೊಳ್ಳುವುದಾದರೆ ನಾನು ಮೊದಲು ಸೌದಿ ಅರೇಬಿಯಕ್ಕೆ ಭೇಟಿ ಕೊಡುತ್ತೇನೆ ಎಂದು ಈಗಾಗಲೇ ಟ್ರಂಪ್ ಹೇಳಿದ್ದಾರೆ. ಇದರ ಬೆನ್ನಿಗೇ 600 ಬಿಲಿಯನ್ ಡಾಲರ್ ಮೊತ್ತವನ್ನು ಅಮೆರಿಕದಲ್ಲಿ ಹೂಡುವುದಾಗಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ್ದಾರೆ. ಇದೀಗ ಎಲ್ಲರ ಗಮನ ಟ್ರಂಪ್ ಮತ್ತು ಮೊಹಮ್ಮದ್ ಬಿನ್ ಸಲ್ಮಾನ್ ಮೇಲೆ ಕೇಂದ್ರೀಕರಿಸಿದೆ ಇಸ್ರೇಲ್ ಮತ್ತು ಫೆಲಸ್ತೀನ್ ನಡುವಿನ ಸಮಸ್ಯೆಗೆ ಇವರು ಪರಿಹಾರವನ್ನು ಕಂಡುಕೊಳ್ಳುತ್ತಾರಾ ಎಂದು ಜಗತ್ತು ಕಾತರದಿಂದ ಕಾಯುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ