ಮಧ್ಯಪ್ರಾಚ್ಯದ ಯುದ್ಧ ಕೊನೆಗಾಣಿಸಲು ವಿಶ್ವದ ದೇಶಗಳು ಭಾರತದ ಕಡೆಗೆ ನೋಡುತ್ತಿದೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ನಾಗಪುರ: ಮಧ್ಯಪ್ರಾಚ್ಯದಲ್ಲಿ (Middle East) ಉಲ್ಬಣಿಸುತ್ತಿರುವ ಸಂಘರ್ಷ ಮತ್ತು ಜಾಗತಿಕ ಅಶಾಂತಿಯ ನಡುವೆ, ಪ್ರಸ್ತುತ ನಡೆಯುತ್ತಿರುವ ಯುದ್ಧಗಳನ್ನು ಕೊನೆಗಾಣಿಸಲು ಭಾರತಕ್ಕೆ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿಕೆ ನೀಡಿದ್ದಾರೆ.
ನಾಗಪುರದಲ್ಲಿ ವಿಶ್ವ ಹಿಂದೂ ಪರಿಷತ್ನ ವಿದರ್ಭ ಪ್ರಾಂತ ಕಚೇರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, “ವಿಶ್ವದ ವಿವಿಧ ದೇಶಗಳು ಇಂದು ಮಧ್ಯಪ್ರಾಚ್ಯದ ಯುದ್ಧವನ್ನು ಕೊನೆಗಾಣಿಸಲು ಭಾರತದ ಕಡೆಗೆ ನೋಡುತ್ತಿವೆ. ಮಾನವೀಯತೆಯ ಧರ್ಮವನ್ನು ಅನುಸರಿಸುವುದು ಭಾರತದ ಸ್ವಭಾವವಾಗಿದೆ. ಅಸ್ಥಿರವಾಗಿರುವ ಜಗತ್ತಿಗೆ ‘ಧರ್ಮ’ದ ಅಡಿಪಾಯದ ಮೂಲಕ ಸಮತೋಲನವನ್ನು ಮರಳಿ ತರುವುದು ನಮ್ಮ ಜವಾಬ್ದಾರಿಯಾಗಿದೆ,” ಎಂದು ಅವರು ತಿಳಿಸಿದರು.
ಭಾರತವು ಮಾನವೀಯತೆಯ ನಿಯಮಗಳನ್ನು ಪಾಲಿಸಿದರೆ, ಜಗತ್ತಿನ ಉಳಿದ ಭಾಗಗಳು ಇಂದಿಗೂ ‘ಕಾಡಿನ ಕಾನೂನು’ (Law of the jungle) ಅಥವಾ ‘ಬಲಿಷ್ಠನೇ ಬದುಕುಳಿಯುತ್ತಾನೆ’ ಎಂಬ ತತ್ವದ ಮೇಲೆ ನಡೆಯುತ್ತಿವೆ. ಈ ಅಸಮತೋಲನವನ್ನು ಸರಿಪಡಿಸುವ ಶಕ್ತಿ ಭಾರತದ ನಾಗರಿಕ ಮೌಲ್ಯಗಳಿಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾರ್ಥ ಮತ್ತು ಪ್ರಾಬಲ್ಯ ಸಾಧಿಸುವ ಹಂಬಲವೇ ಜಾಗತಿಕ ಸಂಘರ್ಷಗಳಿಗೆ ಮೂಲ ಕಾರಣ. ಕಳೆದ 2,000 ವರ್ಷಗಳಿಂದ ಜಗತ್ತು ಸಂಘರ್ಷಗಳನ್ನು ಪರಿಹರಿಸಲು ವಿವಿಧ ಪ್ರಯೋಗಗಳನ್ನು ಮಾಡಿದ್ದರೂ ಯಶಸ್ವಿಯಾಗಿಲ್ಲ. ಆದರೆ, ಭಾರತದ ‘ವಸುಧೈವ ಕುಟುಂಬಕಂ’ ಮತ್ತು ಏಕತೆಯ ದೃಷ್ಟಿಕೋನ ಮಾತ್ರ ಶಾಶ್ವತ ಶಾಂತಿಯನ್ನು ನೀಡಬಲ್ಲದು ಎಂದು ಅವರು ಪ್ರತಿಪಾದಿಸಿದರು.
ಸಮಾಜವು ಸಂಘಟಿತವಾಗಿ ಮತ್ತು ಶಿಸ್ತಿನಿಂದ ಇದ್ದಾಗ ಮಾತ್ರ ಜಗತ್ತು ಗೌರವಿಸುತ್ತದೆ. ಧರ್ಮ ಎಂಬುದು ಕೇವಲ ಪುಸ್ತಕಗಳಲ್ಲಿ ಇರಬಾರದು, ಅದು ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕು ಎಂದು ಭಾಗವತ್ ಕರೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























