ಸಂಭಾಲ್ ಘರ್ಷಣೆ ಪ್ರಕರಣ: ಕಲ್ಲು ತೂರಾಟಗಾರರ ಪೋಸ್ಟರ್‌ಗಳನ್ನು ಪ್ರದರ್ಶಿಸಲು ಯುಪಿ ಸರ್ಕಾರ ಯೋಚನೆ
ಉತ್ತರ ಪ್ರದೇಶ ಸರ್ಕಾರವು ಸಂಭಾಲ್ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಗೆ ಆಗಿರುವ ಹಾನಿಯ ವೆಚ್ಚವನ್ನು ಸಂಗ್ರಹಿಸಲು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ‘ಕಲ್ಲು ತೂರಾಟಗಾರರ’ ಪೋಸ್ಟರ್‌ಗಳನ್ನು ಪ್ರದರ್ಶಿಸಿಲು ಯೋಜಿಸುತ್ತಿದೆ. ಈ ಹಿಂದೆ 2020ರಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆದಾಗ, ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆಗಳಲ್ಲಿ ಪ್ರತಿಭಟನಾಕಾರರ ಪೋಸ್ಟರ್ ಹಾಕಲಾಗಿತ್ತು. ನಂತರ ನ್ಯಾಯಾಲಯದ ಆದೇಶದ ಹಿನ್ನೆಲೆ ಅವುಗಳನ್ನು ತೆರವುಗೊಳಿಸಲಾಗಿತ್ತು.
ಭಾನುವಾರ (ನ24) ಸಂಭಾಲ್‌ನ ಕೋಟ್ ಗಾರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವೇಳೆ ನಡೆದ ಘರ್ಷಣೆಯಲ್ಲಿ ಐವರು ಸಾವನ್ನಪ್ಪಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಮಸೀದಿಯ ಸ್ಥಳದಲ್ಲಿ ಈ ಹಿಂದೆ ಹರಿಹರ ದೇವಾಲಯ ಇತ್ತು ಎಂಬ ಅರ್ಜಿಯ ನಂತರ ಸಮೀಕ್ಷೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು.
“ಸಂಭಾಲ್‌ನಲ್ಲಿ ಹಿಂಸಾಚಾರದಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರವು ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಿದೆ. ಕಲ್ಲು ತೂರಾಟಗಾರರು ಮತ್ತು ದುಷ್ಕರ್ಮಿಗಳ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಅವರಿಂದಲೇ ಹಾನಿಯ ಪಾವತಿಗೆ ಪ್ರಯತ್ನಿಸಲಾಗುತ್ತದೆ. ಆರೋಪಿಗಳ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡುವವರಿಗೆ ಬಹುಮಾನವನ್ನೂ ನೀಡಲಾಗುತ್ತದೆ” ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.
ಸಂಭಾಲ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಇದುವರೆಗೆ ಪೊಲೀಸರು 25 ಮಂದಿಯನ್ನು ಬಂಧಿಸಿದ್ದು, ಏಳು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಸಂಭಾಲ್‌ನ ಸಮಾಜವಾದಿ ಪಕ್ಷದ ಸಂಸದ ಝಿಯಾ-ಉರ್-ರೆಹಮಾನ್ ಬಾರ್ಕ್, ಪಕ್ಷದ ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೊಹೇಲ್ ಇಕ್ಬಾಲ್ ಸೇರಿದಂತೆ 2,750 ಕ್ಕೂ ಹೆಚ್ಚು ಅಪರಿಚಿತ ಶಂಕಿತರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಯುತ್ತಿದೆ ಮತ್ತು ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ವಿಷ್ಣೋಯ್ ಸೋಮವಾರ ಹೇಳಿದ್ದಾರೆ. “ಅಶಾಂತಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj