ಹಿರಿಯ ಕಾಂಗ್ರೆಸ್ ಮುಖಂಡ ಡಿ.ಆರ್.ರಾಜು ನಿಧನ! - Mahanayaka

ಹಿರಿಯ ಕಾಂಗ್ರೆಸ್ ಮುಖಂಡ ಡಿ.ಆರ್.ರಾಜು ನಿಧನ!

d r raju
18/11/2024

ಹಿರಿಯ ಕಾಂಗ್ರೆಸ್ ಮುಖಂಡ, ಹೆಸರಾಂತ ಗುತ್ತಿಗೆದಾರ ಡಿ.ಆರ್. ರಾಜು (68 ವರ್ಷ)  ನಿಧನ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ನೆಲೆಸಿದ್ದ ರಾಜು ಅವರು ಭಾನುವಾರ ಸಂಜೆ ಕಾರ್ಕಳದಲ್ಲಿ ಹೃದಯಾಘಾತದಿಂದ  ಕೊನೆಯುಸಿರೆಳೆದಿದ್ದಾರೆ.

ಮೂಲತಃ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸಮೀಪದ ದೇವರಮಕ್ಕಿ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಡಿ.ಆರ್. ರಾಜು ಅವರು ತನ್ನ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಯಶಸ್ವಿ ಗುತ್ತಿಗೆದಾರರಾಗಿ ಬೆಳೆದಿದ್ದರು.

ಆರಂಭದಲ್ಲಿ ಕುದುರೆಮುಖದಲ್ಲಿ ಸಣ್ಣಮಟ್ಟದಲ್ಲಿ ಕೆಲಸ ಪ್ರಾರಂಭಿಸಿ ನಂತರ ಹಂತ ಹಂತವಾಗಿ ಗುತ್ತಿಗೆದಾರರಾಗಿ ಕುದುರೆಮುಖದ ಅನೇಕ ದೊಡ್ಡ ದೊಡ್ಡ ಕಾಮಗಾರಿಗಳ ಗುತ್ತಿಗೆ ಪಡೆದು ಯಶಸ್ವಿಯಾಗಿದ್ದರು. ಅವರಿಗೆ ಕುದುರೆಮುಖ ರಾಜು ಎಂದೇ ಅನ್ವರ್ಥ ನಾಮದಿಂದ ಕರೆಯಲ್ಪಡುತ್ತಿದ್ದರು.

ರಾಜಕೀಯವಾಗಿ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿದ್ದರು. ಬಂಗಾರಪ್ಪನವರು ಕಾಂಗ್ರೆಸ್ ತ್ಯಜಿಸಿ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಪ್ರಾರಂಭಿಸಿದಾಗ ಅವರೊಂದಿಗೆ ಗುರುತಿಸಿಕೊಂಡಿದ್ದ ರಾಜು ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೆಸಿಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಗಮನಾರ್ಹ ಮತಗಳನ್ನು ಗಳಸಿದ್ದರು. ಬಂಗಾರಪ್ಪನವರ ಪಕ್ಷದಿಂದ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿಯೂ ಸ್ಫರ್ಧಿಸಿದ್ದರು.

ಪ್ರಸ್ತುತ ಅವರು ಕಾಂಗ್ರೇಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿದ್ದರು, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅನೇಕ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಅನೇಕ ಸಮಾಜಸೇವಾ ಕಾರ್ಯಗಳಿಗೆ ಅಪಾರ ದೇಣಿಗೆ ನೀಡಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಡಿ.ಆರ್.ರಾಜು ಅವರು ಕ್ಲಾಸ್ ಒನ್ ಗುತ್ತಿಗೆದಾರರಾಗಿ ಹೆಸರು ಮಾಡಿದ್ದರು. ಗುಣಮಟ್ಟದ ಕೆಲಸಗಳನ್ನು ಮಾಡುವುದರ ಮೂಲಕ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇವರ ಗುಣಮಟ್ಟದ ಕೆಲಸಗಳಿಗೆ 20 ವರ್ಷಗಳ ಹಿಂದೆ ಮಾಡಿದ ಮೂಡಿಗೆರೆ ಪಟ್ಟಣದ ಗಂಗನಮಕ್ಕಿ ಕಾಂಕ್ರೀಟ್ ರಸ್ತೆ, 10 ವರ್ಷಗಳ ಹಿಂದೆ ಮಾಡಿದ ಸಬ್ಬೇನಹಳ್ಳಿ-ಬೆಟ್ಟಗೆರೆ ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳು ನಮ್ಮ ಕಣ್ಣ ಮುಂದಿವೆ.

ರಾಜು ಅವರು ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದಲ್ಲಿ ಮನೆ ಮತ್ತು ಕಾಫಿ ಎಸ್ಟೇಟ್ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ರಾಜು ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘಸಂಸ್ಥೆಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ