‘ವಂದೇ ಮಾತರಂ’ ಗಾಯನ ವೇಳೆ ಸೋನಿಯಾ ಗಾಂಧಿ ಆಕ್ಷೇಪ: ಬಿಜೆಪಿಯಿಂದ ಗಂಭೀರ ಆರೋಪ
ನವದೆಹಲಿ: ಕಾಂಗ್ರೆಸ್‌ನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪೂರ್ಣ ‘ವಂದೇ ಮಾತರಂ’ ಗೀತೆ ಗಾಯನದ ವೇಳೆ ನಡೆದಿದೆ ಎನ್ನಲಾದ ಘಟನೆಯೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಪೂರ್ಣ ಆವೃತ್ತಿಯ ಗಾಯನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಈ ಆರೋಪವನ್ನು ಕಾಂಗ್ರೆಸ್ ತೀವ್ರವಾಗಿ ನಿರಾಕರಿಸಿದೆ.
ಬಿಜೆಪಿಯ ಆರೋಪವೇನು?
ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದ ವಿಡಿಯೋ ತುಣುಕನ್ನು ಹಂಚಿಕೊಂಡ ಬಿಜೆಪಿ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್, “ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಈ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿ. ‘ವಂದೇ ಮಾತರಂ’ ಗಾಯನದ ವೇಳೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದು ಮತ್ತು ಕಾರ್ಯಕರ್ತರನ್ನು ಪ್ರಶ್ನಿಸಿದ್ದು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಬಯಲು ಮಾಡಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಇದು ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂಕೇತವಾದ ಗೀತೆಗೆ ಕಾಂಗ್ರೆಸ್ ಮಾಡಿದ ಅಪಮಾನ ಎಂದು ಬಣ್ಣಿಸಿದ್ದಾರೆ.
ಕಾಂಗ್ರೆಸ್ ಸ್ಪಷ್ಟನೆ:
ಬಿಜೆಪಿಯ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಘಟನೆಯ ಬಗ್ಗೆ ಬಿಜೆಪಿ ಸುಳ್ಳು ಹರಡುತ್ತಿದೆ. ಸುದೀರ್ಘ ಸಮಯದಿಂದ ನಿಂತುಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುಳಿತುಕೊಳ್ಳಲು ಕುರ್ಚಿ ತಂದುಕೊಡುವಂತೆ ಸೋನಿಯಾ ಗಾಂಧಿಯವರು ಕಾರ್ಯಕರ್ತರಿಗೆ ಸೂಚಿಸುತ್ತಿದ್ದರು. ವಂದೇ ಮಾತರಂ ತಡೆಯುವ ಯಾವುದೇ ಯತ್ನ ಅಲ್ಲಿ ನಡೆದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, “ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಲಾಗಿದೆ. 1937ರ ಕಲ್ಕತ್ತಾ ಅಧಿವೇಶನದಿಂದಲೂ ರವೀಂದ್ರನಾಥ ಟಾಗೋರ್ ಅವರ ಸಲಹೆಯಂತೆ ವಂದೇ ಮಾತರಂನ ಆರಂಭಿಕ ಸಾಲುಗಳನ್ನು ಪ್ರತಿಯೊಂದು ಕಾಂಗ್ರೆಸ್ ಅಧಿವೇಶನಗಳಲ್ಲೂ ಹಾಡಿಕೊಂಡು ಬರಲಾಗುತ್ತಿದೆ. ಈ ವಿಷಯದಲ್ಲಿ ಯಾವುದೇ ವಿವಾದವಿಲ್ಲ” ಎಂದು ರಮೇಶ್ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























