ಮಂಗಳೂರು: ಮೊಬೈಲ್ ವಿಚಾರವಾಗಿ ಜಗಳ; ಚಾಕುವಿನಿಂದ ಇರಿದು ಅಣ್ಣನ ಕೊಲೆ ಮಾಡಿದ ತಮ್ಮ! - Mahanayaka

ಮಂಗಳೂರು: ಮೊಬೈಲ್ ವಿಚಾರವಾಗಿ ಜಗಳ; ಚಾಕುವಿನಿಂದ ಇರಿದು ಅಣ್ಣನ ಕೊಲೆ ಮಾಡಿದ ತಮ್ಮ!

police
31/08/2026

ಮಂಗಳೂರು: ಮೊಬೈಲ್ ಫೋನ್ ವಿಚಾರವಾಗಿ ಅಣ್ಣ-ತಮ್ಮನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಅಣ್ಣನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೊಟ್ಟಾರ ಕ್ರಾಸ್ ಬಳಿ ರವಿವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಅಡಿವೆಪ್ಪ (40) ಎಂಬವರು ಮೃತಪಟ್ಟಿದ್ದು, ಹತ್ಯೆಗೈದ ತಮ್ಮ ರಾಜು (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಈ ಅಣ್ಣ-ತಮ್ಮಂದಿರು ಕೊಟ್ಟಾರ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ತಾಯಿ ಗೂಡಂಗಡಿ ನಡೆಸುತ್ತಿದ್ದರೆ, ಇಬ್ಬರು ಸಹೋದರರು ಕೂಲಿ ಕೆಲಸ ಮಾಡಿಕೊಂಡಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ ಇಬ್ಬರಿಗೂ ವಿಪರೀತ ಮದ್ಯಪಾನದ ಚಟವಿತ್ತು ಎಂದು ತಿಳಿದುಬಂದಿದೆ.

ರವಿವಾರ ರಾತ್ರಿ 10:30 ರಿಂದ 11:00 ಗಂಟೆಯ ಸುಮಾರಿಗೆ ಮೊಬೈಲ್ ಫೋನ್ ಬಳಕೆಯ ವಿಚಾರವಾಗಿ ಅಣ್ಣ ಮತ್ತು ತಮ್ಮನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಗರಿಗೇರಿದೆ. ಈ ವೇಳೆ ಆಕ್ರೋಶಗೊಂಡ ರಾಜು, ಚಾಕುವಿನಿಂದ ಅಡಿವೆಪ್ಪನಿಗೆ ಮನಬಂದಂತೆ ಇರಿದಿದ್ದಾನೆ.
ಘಟನೆ ನಡೆದ ಸಂದರ್ಭದಲ್ಲಿ ತಾಯಿ ಅಂಗಡಿ ಮುಚ್ಚಿ ಮನೆಗೆ ವಾಪಸ್ ಬಂದಾಗ, ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಉರ್ವ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ರಾಜುವನ್ನು ಬಂಧಿಸಿದ್ದಾರೆ. ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

mobil chat sitesi