ಖರ್ಗೆ ವಿರುದ್ಧ ಶುದ್ಧೀಕರಣ ಯಾಗ ವಿಚಾರ: ರಾಹುಲ್ ಗಾಂಧಿ ಹೇಳಿಕೆ ವಿರುದ್ಧವೇ ಶ್ರೀ ರಾಮ್ ಸೇನಾ ಮುಖಂಡನಿಂದ ದೂರು! | ದೂರಿನಲ್ಲೇನಿದೆ? - Mahanayaka
10:16 PM Sunday 6 - September 2026

ಖರ್ಗೆ ವಿರುದ್ಧ ಶುದ್ಧೀಕರಣ ಯಾಗ ವಿಚಾರ: ರಾಹುಲ್ ಗಾಂಧಿ ಹೇಳಿಕೆ ವಿರುದ್ಧವೇ ಶ್ರೀ ರಾಮ್ ಸೇನಾ ಮುಖಂಡನಿಂದ ದೂರು! | ದೂರಿನಲ್ಲೇನಿದೆ?

rahul gandhi.jpg
31/08/2026

ಉತ್ತರಾಖಂಡ: ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ‘ಶುದ್ಧೀಕರಣ ಯಾಗ’ದ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ (FIR) ದಾಖಲಾಗಿದೆ.

ವಾಲ್ಮೀಕಿ ಸಮುದಾಯದ ಮುಖಂಡರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಹಲ್ದ್ವಾನಿಯ ಜವಾಹರ್ ನಗರದ ನಿವಾಸಿ ಹಾಗೂ ಶ್ರೀ ರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸದ ಸದಸ್ಯರಾದ ಅಮಿತ್ ಕುಮಾರ್ ಎಂಬುವವರು ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾವು ಪರಿಶಿಷ್ಟ ಜಾತಿ (ವಾಲ್ಮೀಕಿ) ಸಮುದಾಯಕ್ಕೆ ಸೇರಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.

ಆಗಸ್ಟ್ 8 ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದಿತ್ತು. ಇದರ ಬಳಿಕ ಆಗಸ್ಟ್ 11 ರಂದು ಕೆಲವು ವ್ಯಕ್ತಿಗಳು ಅದೇ ಮೈದಾನದಲ್ಲಿ ‘ಶುದ್ಧೀಕರಣ ಯಾಗ’ ಮತ್ತು ಸ್ವಚ್ಛತಾ ಕಾರ್ಯ ನಡೆಸಿದ್ದರು.

ಈ ಸಂಬಂಧ ದೆಹಲಿಯಲ್ಲಿ ಆಗಸ್ಟ್ 29 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಈ ಶುದ್ಧೀಕರಣ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಇದು ‘ಅಸ್ಪೃಶ್ಯತೆ’ಯ ಆಚರಣೆ ಮತ್ತು ದಲಿತ ವಿರೋಧಿ ಮನಸ್ಥಿತಿಯ ಪ್ರತೀಕ ಎಂದು ದೂರಿದ್ದ ಅವರು, ಜವಾಬ್ದಾರರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಆಗ್ರಹಿಸಿದ್ದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ರಾಹುಲ್ ಗಾಂಧಿ ತಮ್ಮ ಹೇಳಿಕೆಗಳ ಮೂಲಕ ಶುದ್ಧೀಕರಣ ಮತ್ತು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದವರನ್ನು ‘ಅಸ್ಪೃಶ್ಯತೆ ಆಚರಿಸುವವರು’ ಮತ್ತು ‘ದಲಿತ ವಿರೋಧಿಗಳು’ ಎಂದು ತಪ್ಪಾಗಿ ಬಿಂಬಿಸಿದ್ದಾರೆ ಎಂದು ದೂರುದಾರ ಅಮಿತ್ ಕುಮಾರ್ ಆರೋಪಿಸಿದ್ದಾರೆ. ಈ ಧಾರ್ಮಿಕ ವಿಧಿಯಲ್ಲಿ ಪರಿಶಿಷ್ಟ ಜಾತಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ಭಾಗವಹಿಸಿದ್ದು, ಇದು ಖರ್ಗೆ ಅವರ ಜಾತಿಗೂ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಭೆಯ ಬಳಿಕ ಮೈದಾನದಲ್ಲಿ ಕಸ ಬಿದ್ದಿದ್ದು ಮತ್ತು ಧಾರ್ಮಿಕ ಸ್ಥಳಕ್ಕೆ ಸೂಕ್ತವಲ್ಲದ ಘೋಷಣೆಗಳನ್ನು ಕೂಗಿದ್ದರಿಂದಲೇ ಆ ಶುದ್ಧೀಕರಣ ನಡೆಸಲಾಗಿತ್ತೇ ಹೊರತು, ಇದರ ಹಿಂದೆ ಯಾವುದೇ ರಾಜಕೀಯ ಅಥವಾ ಜಾತಿ ಉದ್ದೇಶವಿರಲಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ