ಮಹಾಬಲಿಪುರಂ: ದಕ್ಷಿಣದ ರಾಜ್ಯಗಳಿಗೆ ಅನುದಾನ, ಜಲ ನ್ಯಾಯಕ್ಕೆ ಡಿ.ಕೆ. ಶಿವಕುಮಾರ್ ಆಗ್ರಹ
ಮಹಾಬಲಿಪುರಂ: “ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ ಬಲಿಷ್ಠವಾಗುತ್ತದೆ, ದಕ್ಷಿಣ ಭಾರತ ಬಲಿಷ್ಠವಾದರೆ ಇಡೀ ಭಾರತವೇ ಬಲಿಷ್ಠವಾಗುತ್ತದೆ. ದೇಶದ ಒಟ್ಟು ಆರ್ಥಿಕತೆಗೆ ಶೇಕಡಾ 33ರಷ್ಟು ಜಿಡಿಪಿ ಕೊಡುಗೆ ನೀಡುತ್ತಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ಅನುದಾನ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ನ್ಯಾಯಯುತ ಪಾಲು ಸಿಗಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ (Southern Zonal Council) ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಸಾಫ್ಟ್ ವೇರ್ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ. 42 ರಷ್ಟಿದ್ದು, ದೇಶದ ಜಿಡಿಪಿಗೆ ರಾಜ್ಯವು ಶೇ.9 ರಷ್ಟು ಕೊಡುಗೆ ನೀಡುತ್ತಿದೆ. ಆದರೆ, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಸಿಗುತ್ತಿದ್ದ ಪಾಲು ಶೇ. 4.7 ರಿಂದ ಶೇ. 3.6 ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಕಳೆದ 6 ವರ್ಷಗಳಲ್ಲಿ ರಾಜ್ಯಕ್ಕೆ 65,000 ಕೋಟಿ ರೂಪಾಯಿ ನಷ್ಟವಾಗಿದೆ ಹಾಗೂ ಶಿಫಾರಸು ಮಾಡಿದ್ದ 11,495 ಕೋಟಿ ರೂ. ವಿಶೇಷ ಅನುದಾನವೂ ಬಂದಿಲ್ಲ ಎಂದು ಗಮನಸೆಳೆದರು.
ಕ್ಷೇತ್ರಗಳ ಪುನರ್ವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳ ರಾಜಕೀಯ ಧ್ವನಿ ದುರ್ಬಲಗೊಳ್ಳಬಾರದು. ಅದಕ್ಕಾಗಿ 1971ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಳ್ಳಬೇಕು ಹಾಗೂ ತಕ್ಷಣವೇ ಹಾಲಿ ಲೋಕಸಭಾ ಸ್ಥಾನಗಳ ಆಧಾರದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಜಲ ವಿವಾದ ಮತ್ತು ‘ಕರ್ನಾಟಕ ಮಾದರಿ’:
“ನೀರು ರಾಜ್ಯಗಳನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು” ಎಂದು ಹೇಳಿದ ಅವರು, ಅಂತಾರಾಜ್ಯ ಜಲ ವಿವಾದಗಳನ್ನು ಸಹಕಾರ, ಸಮಾನತೆ ಮತ್ತು ಪಾರದರ್ಶಕತೆಯ ಆಧಾರದ ಮೇಲೆ ಬಗೆಹರಿಸಿಕೊಳ್ಳುವ ‘ಕರ್ನಾಟಕ ಮಾದರಿ’ಯನ್ನು ಪ್ರತಿಪಾದಿಸಿದರು. ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳ ಜಲ ಹಂಚಿಕೆಯಲ್ಲಿ ನ್ಯಾಯಮಂಡಳಿಗಳ ತೀರ್ಪಿನಂತೆ ಕರ್ನಾಟಕಕ್ಕೆ ಸಿಗಬೇಕಾದ ಕಾನೂನುಬದ್ಧ ನೀರಿನ ಪಾಲು ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ಕೋರಿದರು.
ರಾಜ್ಯಗಳ ಖನಿಜ ತೆರಿಗೆ ಹಕ್ಕನ್ನು ಬಾಧಿಸುವ Mines & Minerals (MMDR) Act, 2026 ಕಾಯ್ದೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು ಮತ್ತು ಮಾದಕ ವಸ್ತುಗಳ (Drugs) ಕಳ್ಳಸಾಗಣೆ ತಡೆಯಲು ಕಠಿಣ ಕಾನೂನು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























