ರಾಜ್ಯಾದ್ಯಂತ ಆಹಾರ ಸುರಕ್ಷತಾ ತಪಾಸಣೆ ತೀವ್ರ: ಕ್ಯೂಆರ್ ಕೋಡ್ ಬಿಡುಗಡೆ, ಹೋಟೆಲ್ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ - Mahanayaka
10:43 PM Tuesday 8 - September 2026

ರಾಜ್ಯಾದ್ಯಂತ ಆಹಾರ ಸುರಕ್ಷತಾ ತಪಾಸಣೆ ತೀವ್ರ: ಕ್ಯೂಆರ್ ಕೋಡ್ ಬಿಡುಗಡೆ, ಹೋಟೆಲ್ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ

food and drug safety
18/08/2026

ಬೆಂಗಳೂರು:  ರಾಜ್ಯದಲ್ಲಿ ಆಹಾರ ಸುರಕ್ಷತೆ(Food safety) ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಿರುವ ಸರ್ಕಾರ, ಹೋಟೆಲ್‌ ಗಳು ಮತ್ತು ಮೆಡಿಕಲ್ ಸ್ಟೋರ್‌ ಗಳ ಪರಿಶೀಲನೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಇತ್ತೀಚೆಗೆ ರಾಜ್ಯಾದ್ಯಂತ ನಡೆದ ವ್ಯಾಪಕ ದಾಳಿಗಳ ಬೆನ್ನಲ್ಲೇ ಆಹಾರ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಿಶೇಷವಾಗಿ, ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಹೋಟೆಲ್‌ಗಳ ಅಡುಗೆ ಕೋಣೆಯಲ್ಲಿ ಸಿಸಿಟಿವಿ (CCTV) ಅಳವಡಿಕೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ಇನ್ಮುಂದೆ ಕೇವಲ ಹೋಟೆಲ್‌ ಗಳಷ್ಟೇ ಅಲ್ಲದೆ, ಪಿಜಿಗಳು (PG), ಖಾಸಗಿ ಹಾಸ್ಟೆಲ್‌ ಗಳು, ಬಸ್ ನಿಲ್ದಾಣ ಮತ್ತು ರೈಲ್ವೇ ಕ್ಯಾಂಟೀನ್‌ಗಳು ಹಾಗೂ ಮದುವೆ ಸಮಾರಂಭಗಳ ಕ್ಯಾಟರಿಂಗ್ ಸೇವೆಗಳ ಮೇಲೆಯೂ ಆಹಾರ ಸುರಕ್ಷತಾ ಅಧಿಕಾರಿಗಳು ಕಣ್ಣಿಡಲಿದ್ದಾರೆ.

ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಕಡ್ಡಾಯ. ಯುವಜನರು ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟವಾಡಿ ಹಣ ಗಳಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದ್ದು, ಪಿಜಿಗಳಿಗೆ ಪ್ರತ್ಯೇಕ ಮಾರ್ಗಸೂಚಿ (Guidelines) ಬಿಡುಗಡೆ ಮಾಡಲಾಗುತ್ತದೆ.

ಸಾರ್ವಜನಿಕರು ಆಹಾರ ಅಥವಾ ಔಷಧಗಳ ಕಳಪೆ ಗುಣಮಟ್ಟದ ಬಗ್ಗೆ ಸುಲಭವಾಗಿ ದೂರು ನೀಡಲು ಹೋಟೆಲ್ ಹಾಗೂ ಮೆಡಿಕಲ್ ಸ್ಟೋರ್‌ಗಳಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡಿ ನೇರವಾಗಿ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು. ರಾಜ್ಯದಲ್ಲಿ ಈ ರೀತಿಯ ವ್ಯವಸ್ಥೆ ಜಾರಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಹೋಟೆಲ್‌ ಗಳಲ್ಲಿ ಶುಚಿತ್ವ ಹಾಗೂ ಆಹಾರ ತಯಾರಿಕಾ ವಿಧಾನ ಪಾರದರ್ಶಕವಾಗಿರಲು ಅಡುಗೆ ಕೋಣೆಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು.

ರಾಜ್ಯಾದ್ಯಂತ 30 ವಿಶೇ‍ಷ ತಂಡಗಳನ್ನು ರಚಿಸಿ 3 ಸ್ಟಾರ್, 5 ಸ್ಟಾರ್ ಹೋಟೆಲ್‌ಗಳು, ವೇರ್‌ಹೌಸ್‌ಗಳು ಹಾಗೂ ಅಂತಾರಾಷ್ಟ್ರೀಯ ರೆಸ್ಟೋರೆಂಟ್‌ಗಳ ಮೇಲೆ ತಪಾಸಣೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿದ 30ಕ್ಕೂ ಹೆಚ್ಚು ಆಹಾರ ಉದ್ದಿಮೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.

ಆಹಾರ ಸುರಕ್ಷತೆಗಾಗಿ ಶ್ರಮಿಸಿದ ಅಧಿಕಾರಿಗಳನ್ನು ಗೌರವಿಸಿದ ಸಚಿವರು, ಯಾವುದೇ ಕಾರಣಕ್ಕೂ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi