ಆರಾಧನಾ ಸ್ಥಳಗಳ ಕಾಯ್ದೆಯನ್ನು ಜಾರಿ ಮಾಡಿ: ಓವೈಸಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ಆರಾಧನಾ ಸ್ಥಳಗಳ ಕಾಯ್ದೆ-1991ರ ಪರಿಣಾಮಕಾರಿ ಅನುಷ್ಠಾನ ಕೋರಿ ಆಲ್ ಇಂಡಿಯಾ ಮಜ್ಲಿಸ್ -ಎ-ಇತ್ತೆಹಾದುಲ್-ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ
ಒಪ್ಪಿದೆ. ಡಿಸೆಂಬರ್ 12ರಂದು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆಗೆ ಯಾವುದೇ ಆದೇಶ ನೀಡದಂತೆ ದೇಶದ ಎಲ್ಲಾ ನ್ಯಾಯಾಲಯಗಳಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ರ ಪೀಠವು ಜಮಿಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿಯೊಂದಿಗೆ ಈ ಅರ್ಜಿಯನ್ನು ಸೇರಿಸಲು ಆದೇಶಿಸಿದೆ.
ಓವೈಸಿ ಪರ ವಕೀಲ ನಿಝಾಮುದ್ದೀನ್ ಪಾಷಾ ವಾದ ಮಂಡಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 17ರಂದು ನಡೆಯಲಿದೆ.
ಆರಾಧನಾ ಸ್ಥಳಗಳ ಕಾಯ್ದೆ-1991ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ಪಿಐಎಲ್) ಕಕ್ಷಿದಾರರಾಗಿ ಸೇರ್ಪಡೆಗೊಳಿಸುವಂತೆ ಕೋರಿ ಜಮಿಯತ್ ಉಲಮಾ-ಎ-ಹಿಂದ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಡಿಸೆಂಬರ್ 12ರ ಮಧ್ಯಂತರ ಆದೇಶವು ದೇಶದಾದ್ಯಂತ ಧಾರ್ಮಿಕ ಕೇಂದ್ರಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸುಮಾರು 18 ಪ್ರಕರಣಗಳ ಮೇಲೆ ಪರಿಣಾಮ ಬೀರಿದೆ. ಈ ಎಲ್ಲಾ ಪ್ರಕರಣಗಳು ಮಸೀದಿಗಳನ್ನು ದೇವಸ್ಥಾನಗಳ ಜಾಗಗಳಲ್ಲಿ ಕಟ್ಟಲಾಗಿದೆ. ಅವುಗಳನ್ನು ಹಿಂದೂಗಳಿಗೆ ಹಿಂದಿರುಗಿಸುವಂತೆ ಕೋರಿ ಹಿಂದುತ್ವ ಸಂಘಟನೆಗಳು ಮತ್ತು ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj