ಜೀವ ಕೈಯಲ್ಲಿ ಹಿಡಿದುಕೊಂಡು ಕಾಲು ಸಂಕದಾಟುತ್ತಿರುವ ಸುರೇಶ್ ನಾಯ್ಕ್ ಕುಟುಂಬ - Mahanayaka
5:55 PM Tuesday 12 - November 2024

ಜೀವ ಕೈಯಲ್ಲಿ ಹಿಡಿದುಕೊಂಡು ಕಾಲು ಸಂಕದಾಟುತ್ತಿರುವ ಸುರೇಶ್ ನಾಯ್ಕ್ ಕುಟುಂಬ

chikamagalore
18/08/2024

  • ಸಂತೋಷ್ ಅತ್ತಿಗೆರೆ

ಕೊಟ್ಟಿಗೆಹಾರ: ತರುವೆ ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ನೂರಾರು ಎಕರೆ ಕೃಷಿ ಭೂಮಿ ಸಂಪರ್ಕ ರಸ್ತೆ ಇಲ್ಲದೇ ಪಾಳು ಬಿದ್ದಿದೆ.ಇಲ್ಲಿನ ಪರಿಶಿಷ್ಟ ಪಂಗಡದ ಕುಟುಂಬವೊಂದು ಮಳೆಗಾಲ ಬಂತೆಂದರೆ ತಮ್ಮ ಮನೆ ತಲುಪಲು ಸಾಧ್ಯವಾಗದೇ ಕಂಗಾಲಾಗುತ್ತಿದೆ. ಕೊಟ್ಟಿಗೆಹಾರದ ತರುವೆ ಗ್ರಾಮದ ಸುರೇಶ್ ನಾಯ್ಕ್ ಅವರ ಕುಟುಂಬದ ಸತ್ಯ ಕಥೆಯಿದು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಹೇಮಾವತಿಯ ಉಪ ನದಿಯಾದ ಸೋಮಾವತಿ ಮಳೆಗಾಲದಲ್ಲಿ ತುಂಬಿ ಹರಿದು ಹೇಮಾವತಿ ಸೇರುತ್ತದೆ. ಆ ನದಿಯ ಮತ್ತೊಂದು ಬದಿಯಲ್ಲಿ ಸುರೇಶ್ ನಾಯ್ಕ್ ಕುಟುಂಬ ಅನೇಕ ವರ್ಷದಿಂದ ಸೂರು ಕಟ್ಟಿಕೊಂಡು ಜೀವನ ನಡೆಸುತ್ತಿದ್ದು ಮಳೆಗಾಲ ಬಂತೆಂದರೆ ರಸ್ತೆ ಸಂಪರ್ಕವೂ ಇಲ್ಲದೇ ಜೀವ ಭಯದಲ್ಲೇ ಜೀವನ ನಡೆಸಿ ಸಂಪರ್ಕ ಕಸಿದು ಹೋಗುತ್ತಿದೆ. ಕುಟುಂಬ ಹಳ್ಳ ದಾಟಿ ಮನೆ ತಲುಪುವ ಸಾಹಸದ ಕೆಲಸಕ್ಕೆ ಇವರು ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ. ಅಪಾಯಕಾರಿ ಕಾಲುಸಂಕ(ಮರದದಿಮ್ಮಿಯ ಜೋಡಣೆ)ದಾಟಿ ಮನೆ ಸೇರುವುದು ಇವರಿಗೆ ಅನಿವಾರ್ಯತೆಯಾಗಿದೆ.

ತುಂಬಿ ಹರಿಯುವ ಸೋಮಾವತಿ ಹಳ್ಳವನ್ನು ದಾಟಿ ಆಚೇಗಿನ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡಲು ಅನುಕೂಲ ಇಲ್ಲದ ಕಾರಣಕ್ಕೆ ನೂರಾರು ಎಕರೆ ಫಲವತ್ತಾದ ಗದ್ದೆಗಳು ಕೃಷಿ ಮಾಡದೇ ಪಾಳು ಬಿಟ್ಟು ಬರಡಾಗಿವೆ. ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಜನಪ್ರತಿನಿಧಿಗಳಿಗೆ, ಶಾಸಕರಿಗೆ ಮೂರು ವರ್ಷದಿಂದ ಸಂತ್ರಸ್ತ ಸುರೇಶ್ ಕುಟುಂಬ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೂ ಕಾಲು ಸಂಕ ಮಾತ್ರ ಬದಲಾಗಿಲ್ಲ.

ಪರಿಶಿಷ್ಟ ಪಂಗಡದ ಕುಟುಂಬಕ್ಕೆ ಮೂಲಭೂತ ಸಂಪರ್ಕದ ಆಸರೆ ಸಿಗದೇ ಪರದಾಡುವಂತಾಗಿದೆ. ಮಲೆನಾಡಿನ ಈ ಗ್ರಾಮೀಣ ಪ್ರದೇಶದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಇರುವ ಅವಕಾಶವನ್ನು ಬಳಸಿಕೊಂಡು ಈ ತರುವೆ ಗ್ರಾಮದ ಕುಟುಂಬಕ್ಕೂ ಕೂಡ ಸೇತುವೆ ನಿರ್ಮಾಣ ಮಾಡಲು ಸ್ಥಳೀಯರ ಒತ್ತಾಯವಿದೆ.




ಹಾಗಾದಲ್ಲಿ ಈ ಭಾಗದ ಕೃಷಿಕರಿಗೂ ಕೂಡ ಶಾಶ್ವತ ಪರಿಹಾರ ಸಿಕ್ಕಿದಂತಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಈ ಕುಟುಂಬದ ಸಮಸ್ಯೆ ಬಗೆಹರಿಸಲು ಮುಂದೆ ಬರಬೇಕು. ‘ ಮೂರು ವರ್ಷದಿಂದ ನಮಗೆ ಕಿರು ಸೇತುವೆ ಮಾಡಿಕೊಡಿ ಎಂದು ಸರ್ಕಾರಿ ಅಧಿಕಾರಿಗಳಿಗೂ, ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ’

–ಸುರೇಶ್ ನಾಯ್ಕ್, ಸಂತ್ರಸ್ತ,ಕೊಟ್ಟಿಗೆಹಾರ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ