ಮೇಜರ್ ಲೀಗ್ ಬೇಸ್‌ಬಾಲ್ ಪ್ರಚಾರ ರಾಯಭಾರಿಯಾಗಿ ಸೂರ್ಯಕುಮಾರ್ ಯಾದವ್ ನೇಮಕ - Mahanayaka

ಮೇಜರ್ ಲೀಗ್ ಬೇಸ್‌ಬಾಲ್ ಪ್ರಚಾರ ರಾಯಭಾರಿಯಾಗಿ ಸೂರ್ಯಕುಮಾರ್ ಯಾದವ್ ನೇಮಕ

SKY MLB Ambassador.jpg
10/07/2026

ಭಾರತದಲ್ಲಿ ಬೇಸ್‌ಬಾಲ್ ಕ್ರೀಡೆಯನ್ನು ಜನಪ್ರಿಯಗೊಳಿಸಲು ಅಮೆರಿಕದ ಪ್ರಸಿದ್ಧ ‘ಮೇಜರ್ ಲೀಗ್ ಬೇಸ್‌ಬಾಲ್’ (MLB) ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಮತ್ತು ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (SKY) ಅವರನ್ನು ಭಾರತದ ಅಧಿಕೃತ ಪ್ರಚಾರ ರಾಯಭಾರಿಯನ್ನಾಗಿ (ಬ್ರ್ಯಾಂಡ್ ಅಂಬಾಸಿಡರ್) ಎಂಎಲ್​ ಬಿ ನೇಮಕ ಮಾಡಿದೆ.

ಈ ಹೊಸ ಪಾಲುದಾರಿಕೆಯ ಅಡಿಯಲ್ಲಿ, ಸೂರ್ಯಕುಮಾರ್ ಅವರು ಭಾರತ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಎಂಎಲ್​ಬಿ ಅಭಿಯಾನಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಜುಲೈ 10 ರಿಂದ 14 ರವರೆಗೆ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಎಂಎಲ್​ಬಿ ಆಲ್-ಸ್ಟಾರ್ ವೀಕ್’ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಕ್ರೀಡಾ ಅಭಿಮಾನಿಗಳನ್ನು ಸೆಳೆಯಲು ಡಿಜಿಟಲ್ ಕಂಟೆಂಟ್ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ಬೇಸ್‌ಬಾಲ್ ಕ್ರೀಡೆಯನ್ನು ಭಾರತೀಯರಿಗೆ ತಲುಪಿಸಲು ಅವರು ಶ್ರಮಿಸಲಿದ್ದಾರೆ.

ಈ ಕುರಿತು ಮಾತನಾಡಿದ ಸೂರ್ಯಕುಮಾರ್ ಯಾದವ್, “ಕ್ರೀಡೆಯು ಜನರನ್ನು ಒಗ್ಗೂಡಿಸುತ್ತದೆ. ಎಂಎಲ್​ಬಿ ಜೊತೆ ಕೈಜೋಡಿಸಲು ನಾನು ಉತ್ಸುಕನಾಗಿದ್ದೇನೆ. ಬೇಸ್‌ಬಾಲ್ ಆಟದ ಶಕ್ತಿ, ಉತ್ಸಾಹ ಮತ್ತು ಸಂಸ್ಕೃತಿಯನ್ನು ಹೆಚ್ಚಿನ ಭಾರತೀಯ ಕ್ರೀಡಾ ಅಭಿಮಾನಿಗಳು ಕಂಡುಕೊಳ್ಳಲು ಸಹಾಯ ಮಾಡಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.

ಜಿಯೋಸ್ಟಾರ್ ಜೊತೆಗಿನ ಒಪ್ಪಂದ ನವೀಕರಣ:
ಇದೇ ವೇಳೆ ಎಂಎಲ್​ಬಿ ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಯಾದ ‘ಜಿಯೋಸ್ಟಾರ್’ (JioStar) ಜೊತೆಗಿನ ಪ್ರಸಾರ ಒಪ್ಪಂದವನ್ನು ನವೀಕರಿಸಿದೆ. ಇದರ ಅಡಿಯಲ್ಲಿ ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎಂಎಲ್ ​ಬಿ ಪಂದ್ಯಗಳು ಭಾರತದಲ್ಲಿ ನೇರ ಪ್ರಸಾರವಾಗಲಿವೆ. ಆಲ್-ಸ್ಟಾರ್ ಗೇಮ್, ಪ್ರಮುಖ ಸೀಸನ್ ಪಂದ್ಯಗಳು ಮತ್ತು ವಿಶ್ವ ಸರಣಿಯ ಪಂದ್ಯಗಳನ್ನು ಕ್ರೀಡಾ ಪ್ರೇಮಿಗಳು ಇನ್ಮುಂದೆ ಜಿಯೋಸ್ಟಾರ್ ಮೂಲಕ ವೀಕ್ಷಿಸಬಹುದಾಗಿದೆ.

ಸೂರ್ಯಕುಮಾರ್ ಅವರ ಜನಪ್ರಿಯತೆ ಮತ್ತು ಜಿಯೋಸ್ಟಾರ್ ಮಾಧ್ಯಮದ ವ್ಯಾಪ್ತಿಯು ಭಾರತದಲ್ಲಿ ಬೇಸ್‌ಬಾಲ್ ಕ್ರೀಡೆಗೆ ಭದ್ರ ಅಡಿಪಾಯ ಹಾಕಲಿದೆ ಎಂದು ಎಂಎಲ್​ಬಿ ಗ್ಲೋಬಲ್ ಆಪರೇಷನ್ಸ್‌ನ ಹಿರಿಯ ಉಪಾಧ್ಯಕ್ಷ ಜೆರೆಮಿಯಾ ಯೋಲ್ಕುಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ