ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಕಳ್ಳರು, ತಾವೇ 112 ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದರು! - Mahanayaka
1:28 PM Tuesday 8 - September 2026

ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಕಳ್ಳರು, ತಾವೇ 112 ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದರು!

thieves
21/08/2026

ಸುರತ್ (ಗುಜರಾತ್):  ಆಭರಣದ ಅಂಗಡಿಯೊಂದಕ್ಕೆ ಕನ್ನ ಹಾಕಲು ಬಂದ ಇಬ್ಬರು ಕಳ್ಳರು, ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಅಂಗಡಿಯೊಳಗೇ ಬಂಧಿಯಾಗಿದ್ದು, ಕೊನೆಗೆ ಸಾರ್ವಜನಿಕರ ಕೈಯಿಂದ ಧರ್ಮದೇಟು ಬೀಳಬಹುದು ಎಂಬ ಭಯಕ್ಕೆ ತಾವೇ ತುರ್ತು ಪೊಲೀಸ್ ಸಂಖ್ಯೆ 112 ಗೆ ಕರೆ ಮಾಡಿ ರಕ್ಷಣೆ ಕೋರಿದ ವಿಚಿತ್ರ ಘಟನೆ ಗುಜರಾತ್‌ನ ವಲ್ಸಾದ್ ಜಿಲ್ಲೆಯ ಸಂಜಾನ್ ಪ್ರದೇಶದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ಹಾಗೂ ನಾಲಾಸೋಪಾರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ದಿನೇಶ್ (32) ಮತ್ತು ವಿಪಿನ್ (27) ಎಂಬಿಬ್ಬರು ಆರೋಪಿಗಳು, ಸಂಜಾನ್ ಮಾರುಕಟ್ಟೆಯಲ್ಲಿರುವ ‘ಬಿ.ಜೆ. ಜ್ಯುವೆಲರ್ಸ್’ ಅಂಗಡಿಯನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು.

ಬುಧವಾರ ಬೆಳಗಿನ ಜಾವ ಸುಮಾರು 2 ಗಂಟೆಯ ಸುಮಾರಿಗೆ ಕಳ್ಳರು ಕಟರ್ ಬಳಸಿ ಅಂಗಡಿಯ ಶಟರ್ ಲಾಕ್ ಕತ್ತರಿಸಲು ಶುರು ಮಾಡಿದ್ದರು. ಯಾರಿಗೂ ಅನುಮಾನ ಬಾರದಿರಲಿ ಎಂದು ಅವರು ಪ್ರತಿ ಕೆಲ ನಿಮಿಷಕ್ಕೊಮ್ಮೆ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು. ಆದರೆ, ಅದೇ ಸಮಯದಲ್ಲಿ ಆ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ಸುತ್ತಮುತ್ತಲಿನ ಜನರು ಹೆಚ್ಚು ಜಾಗರೂಕರಾಗಿದ್ದರು.

ಜ್ಯುವೆಲರಿ ಮಾಲೀಕ ಮನೀಶ್ ಶರ್ಮಾ ಅವರ ಸ್ನೇಹಿತರೊಬ್ಬರು ವಿದ್ಯುತ್ ಹೋದ ಕಾರಣ ಎಚ್ಚರಗೊಂಡಾಗ, ಶಟರ್ ಒಡೆಯಲು ಯತ್ನಿಸುತ್ತಿದ್ದ ಕಳ್ಳರನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ಮಾಲೀಕರಿಗೆ ಸುದ್ದಿ ಮುಟ್ಟಿಸಿ ಅಂಗಡಿಯತ್ತ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಳ್ಳರು ಶಟರ್ ತೆರೆದು ಅಂಗಡಿಯೊಳಗೆ ಪ್ರವೇಶಿಸಿದ್ದರು.

ಪರಿಸ್ಥಿತಿಯನ್ನು ತಕ್ಷಣ ಗ್ರಹಿಸಿದ ಸ್ಥಳೀಯರು, ಕಳ್ಳರು ಹೊರಬರದಂತೆ ಹೊರಗಿನಿಂದ ಶಟರ್ ಎಳೆದು ಮುಚ್ಚಿ ಬಂದ್ ಮಾಡಿದ್ದಾರೆ.

ಧರ್ಮದೇಟಿನ ಭಯಕ್ಕೆ 112 ಗೆ ಕರೆ!

ಅಂಗಡಿಯ ಹೊರಗೆ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ, ಹೊರಗೆ ಬಂದರೆ ಜನರಿಂದ ಧರ್ಮದೇಟು ಖಚಿತ ಎಂದು ಹೆದರಿದ ಕಳ್ಳರು, ತಮ್ಮ ಬಳಿಯಿದ್ದ ಫೋನ್‌ ನಿಂದ ತುರ್ತು ಪೊಲೀಸ್ ಸಹಾಯವಾಣಿ 112 ಗೆ ತಾವೇ ಕರೆ ಮಾಡಿ ನೆರವು ಕೋರಿದ್ದಾರೆ! ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ‘112’ ತುರ್ತು ಸ್ಪಂದನಾ ಪಡೆ (112 Response Team), ಅಂಗಡಿಯ ಶಟರ್ ತೆರೆದು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಉಮರ್‌ ಗಾಮ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಡಿ. ತುವಾರ್ ಮಾತನಾಡಿ, “ಸ್ಥಳೀಯ ನಾಗರಿಕರು ತೋರಿಸಿದ ಸಮಯಪ್ರಜ್ಞೆ ಮತ್ತು ಸಮಯೋಚಿತ ನಿರ್ಧಾರದಿಂದಾಗಿ ಆರೋಪಿಗಳನ್ನು ತಕ್ಷಣವೇ ಬಂಧಿಸಲು ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi