ನೈಸ್ ರಸ್ತೆ ಟೋಲ್ ವಿವಾದ: ಎಫ್‌ ಐಆರ್ ಹಾಕಿದರೂ ಹೆದ್ರಬೇಡಿ, ಯಾರೂ ಟೋಲ್ ಕಟ್ಟಬೇಡಿ: ಎಚ್.ಡಿ ಕುಮಾರಸ್ವಾಮಿ ಕರೆ - Mahanayaka
7:21 AM Tuesday 8 - September 2026

ನೈಸ್ ರಸ್ತೆ ಟೋಲ್ ವಿವಾದ: ಎಫ್‌ ಐಆರ್ ಹಾಕಿದರೂ ಹೆದ್ರಬೇಡಿ, ಯಾರೂ ಟೋಲ್ ಕಟ್ಟಬೇಡಿ: ಎಚ್.ಡಿ ಕುಮಾರಸ್ವಾಮಿ ಕರೆ

h d kumaraswamy
21/08/2026

ಬೆಂಗಳೂರು: ನೈಸ್ ರಸ್ತೆ (Nice Road) ಟೋಲ್ ಸಂಗ್ರಹದ ವಿಚಾರವಾಗಿ ರಾಜ್ಯದಲ್ಲಿ ತೀವ್ರ ಗೊಂದಲ ಹಾಗೂ ವಾಗ್ವಾದ ಮುಂದುವರಿದಿದೆ. ವಾಹನ ಸವಾರರು ಟೋಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದು, ಟೋಲ್ ಸಿಬ್ಬಂದಿ ಮತ್ತು ಸವಾರರ ನಡುವೆ ನಿತ್ಯವೂ ಮಾತಿನ ಚಕಮಕಿ ನಡೆಯುತ್ತಿದೆ. ಈ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಸಲಹೆ ನೀಡಿದ್ದಾರೆ.

ಸಾರ್ವಜನಿಕರಿಗೆ ಕೈಮುಗಿದು ಮನವಿ ಮಾಡುತ್ತೇನೆ, ಯಾರೂ ಕೂಡ ಯಾವುದೇ ಕಾರಣಕ್ಕೂ ನೈಸ್ ರಸ್ತೆ ಟೋಲ್ ಕಟ್ಟಬೇಡಿ ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ. ಟೋಲ್ ಪಾವತಿಸದಿದ್ದರೆ ಸಿಬ್ಬಂದಿ ಕಾನೂನು ಕ್ರಮ ಅಥವಾ ಎಫ್‌ ಐಆರ್ (FIR) ಹಾಕುವುದಾಗಿ ಎಚ್ಚರಿಕೆ ನೋಟಿಸ್ ಅಂಟಿಸುತ್ತಿದ್ದು, ಇದಕ್ಕೆ ಸವಾರರು ಹೆದರಬೇಕಿಲ್ಲ ಎಂದು ಅವರು ಅಭಯ ನೀಡಿದ್ದಾರೆ.

ಕಾನೂನುಬಾಹಿರವಾಗಿ ಹಗಲು ದರೋಡೆ ಮಾಡುತ್ತಿರುವ ನೈಸ್ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸವಾರರು ಧೈರ್ಯದಿಂದ ನಿಲ್ಲಬೇಕು ಎಂದು ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಥೆಯ ವಿರುದ್ಧ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಅಕ್ರಮವಾಗಿ ಟೋಲ್ ಕಲೆಕ್ಷನ್ ನಡೆಯುತ್ತಿದೆ ಎಂದು ನ್ಯಾಯಾಲಯವೇ ಹೇಳಿದೆ. ಫ್ರೇಮ್ ವರ್ಕ್ ಉಲ್ಲಂಘನೆಯಾಗಿರುವುದು ಎಲ್ಲರಿಗೂ ಗೊತ್ತಿದೆ. ನೈಸ್ ಸಂಸ್ಥೆಗೂ ರಾಜ್ಯ ಸರ್ಕಾರಕ್ಕೂ ಏನು ಸಂಬಂಧ? ಇಲ್ಲಿಯವರೆಗೆ ರೂ. 2000 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೋ ಅಥವಾ ನೈಸ್ ಕಂಪನಿಯ ಮಾಲೀಕರಾಗಿ ಸರ್ಕಾರ ನಡೆಸುತ್ತಿದ್ದಾರೋ? ಯಾಕೆ ಈ ಟೋಲ್ ಅನ್ನು ತಕ್ಷಣ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು.

ಸವಾರರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ:

ಕೇಂದ್ರ ಸಚಿವರು ಮೊನ್ನೆಯಷ್ಟೇ “ಯಾರೂ ಟೋಲ್ ಕಟ್ಟಬೇಡಿ” ಎಂದು ಹೇಳಿಕೆ ನೀಡಿದ ಬಳಿಕ, ವಾಹನ ಸವಾರರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ಟೋಲ್ ಸಿಬ್ಬಂದಿಗೆ ತೋರಿಸಿ ಹಣ ನೀಡಲು ನಿರಾಕರಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳು, ಕಾರು, ಲಾರಿ ಹಾಗೂ ಆಟೋ ಚಾಲಕರು ಟೋಲ್ ಬೂತ್‌ಗಳಲ್ಲೇ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಮತ್ತೊಂದೆಡೆ, “ಇಂತಹ ಯಾವುದೇ ಅಧಿಕೃತ ಸರ್ಕಾರದ ಆದೇಶ ಬಂದಿಲ್ಲ” ಎಂದು ವಾದಿಸುತ್ತಿರುವ ಸಿಬ್ಬಂದಿ, ನಿಯಮ ಮೀBದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯ ನೋಟಿಸ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ.

ಈ ಗೊಂದಲದ ವಾತಾವರಣದಿಂದಾಗಿ ನೈಸ್ ರಸ್ತೆ ಬಳಕೆದಾರರು ಮತ್ತು ಟೋಲ್ ನಿರ್ವಾಹಕರ ನಡುವೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi