ಫೈನಲ್ ‌ನಿಂದ ವಿನೇಶ್ ಅನರ್ಹತೆ ಹಿಂದೆ ದೊಡ್ಡ ಸಂಚು ಇದೆ: ಒಲಿಂಪಿಕ್ ಪದಕ ವಿಜೇತ ವಿಜೇಂದರ್ ಸಿಂಗ್ ಗಂಭೀರ ಆರೋಪ - Mahanayaka

ಫೈನಲ್ ‌ನಿಂದ ವಿನೇಶ್ ಅನರ್ಹತೆ ಹಿಂದೆ ದೊಡ್ಡ ಸಂಚು ಇದೆ: ಒಲಿಂಪಿಕ್ ಪದಕ ವಿಜೇತ ವಿಜೇಂದರ್ ಸಿಂಗ್ ಗಂಭೀರ ಆರೋಪ

07/08/2024


Provided by

ಭಾರತದ ಕುಸ್ತಿ ತಾರೆ ವಿನೇಶ್ ಪೊಗಟ್ ಅವರನ್ನು ಒಲಂಪಿಕ್ಸ್ ಕುಸ್ತಿ ಪಂದ್ಯದ ಫೈನಲ್ ಸ್ಪರ್ಧೆಯಿಂದ ಅನರ್ಹಗೊಳಿಸಿರುವುದರ ಹಿಂದೆ ಭಾರೀ ಸಂಚು ಅಡಗಿದೆ ಎಂದು ಭಾರತದ ಮಾಜಿ ಬಾಕ್ಸಿಂಗ್ ತಾರೆ ಮತ್ತು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಕುಸ್ತಿಪಟು ವಿಜೇಂದರ್ ಸಿಂಗ್ ಹೇಳಿದ್ದಾರೆ. ವಿನೇಶ್ ಪೊಗಟ್ ಫೈನಲ್ ಸ್ಪರ್ಧಿಸುವುದರಲ್ಲಿ ಯಾರಿಗೋ ಸಮಸ್ಯೆ ಇತ್ತು ಮತ್ತು ಅದರಿಂದಾಗಿ ಅವರನ್ನು ಅನರ್ಹಗೊಳಿಸುವುದಕ್ಕೆ ಬೇಕಾದ ಸಂಚು ನಡೆದಿರುವ ಸಾಧ್ಯತೆ ಇದೆ ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.

ನಿಗದಿತ ಐವತ್ತು ಕಿಲೋ ಗಿಂತ 100 ಗ್ರಾಂ ಹೆಚ್ಚು ತೂಕ ಇದ್ದ ಕಾರಣವನ್ನು ಕೊಟ್ಟು ವಿನೇಶ್ ಪೊಗಟ್ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಆದರೆ 100 ಗ್ರಾಂ ತೂಕವನ್ನು ಕಡಿಮೆಗೊಳಿಸಲು ಅವರಿಗೆ ಅವಕಾಶ ನೀಡಬೇಕಿತ್ತು ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.

ಭಾರತ ಮತ್ತು ಕುಸ್ತಿ ಪಟುಗಳ ವಿರುದ್ಧ ನಡೆದ ದೊಡ್ಡದೊಂದು ಸಂಚು ಇದಾಗಿರುವಂತಿದೆ. ಪೊಗಟ್ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಬೇಕು. ಆದರೆ ಕೆಲವರಿಗೆ ಅವರ ಈ ಪ್ರದರ್ಶನ ಜೀರ್ಣವಾದಂತೆ ಕಾಣಿಸುತ್ತಿಲ್ಲ. ಒಂದು ರಾತ್ರಿಯ ಒಳಗೆ ನಮಗೆ ಐದರಿಂದ ಆರು ಕಿಲೋ ಗ್ರಾಂನಷ್ಟು ತೂಕವನ್ನು ಕಡಿಮೆಗೊಳಿಸಲು ಸಾಧ್ಯವಿದೆ.

ಹೀಗಿರುವಾಗ 100 ಗ್ರಾಂ ಯಾವ ಲೆಕ್ಕ. ಯಾರಿಗೋ ವಿನೇಶ್ ಪೊಗಟ್ ಸಮಸ್ಯೆಯಾಗಿದ್ದಾರೆ. ಆ ಕಾರಣದಿಂದಲೇ ಅವರನ್ನು ಅಯೋಗ್ಯ ಗೊಳಿಸುವ ಸಂಚು ನಡೆದಿರುವಂತಿದೆ. ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ನನಗೆ ಇಂಥದ್ದೊಂದು ಅನುಭವ ಆಗಿಲ್ಲ ಎಂದು ಅವರು ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕುಸ್ತಿ ಫೆಡರೇಶನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಕುಸ್ತಿಪಟು ಗಳಲ್ಲಿ ವಿನೇಶ್ ಪೊಗಟ್ ಮುಂಚೂಣಿಯಲ್ಲಿದ್ದರು. ಕೇಂದ್ರ ಸರಕಾರ ಆ ಸಂದರ್ಭದಲ್ಲಿ ಕುಸ್ತಿಪಟುಗಳ ಬದಲು ಬ್ರಿಜ್ ಬೂಶನ್ ಸಿಂಗ್ ಪರ ನಿಲುವು ವಹಿಸಿತ್ತು ಮತ್ತು ಕುಸ್ತಿಪಟುಗಳನ್ನು ಹೀನಾಯವಾಗಿ ನಡೆಸಿಕೊಂಡಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ