ಯುವಜನತೆಯ ನಾಳೆಗಳ ಸವಾಲುಗಳು - Mahanayaka

ಯುವಜನತೆಯ ನಾಳೆಗಳ ಸವಾಲುಗಳು

dammapriya
06/01/2023

  • ಧಮ್ಮಪ್ರಿಯಾ ಬೆಂಗಳೂರು

ಓದುಗರು ಬೇರೆಯವರ ಅನುಭವ, ಅವರ ಬದುಕಲ್ಲಿ ನಡೆದ ಘಟನೆಗಳನ್ನು ಕಥೆ,ಲೇಖನ, ನಾಟಕ, ಕಾವ್ಯಗಳ ರೂಪದಲ್ಲಿ ಸಾಹಿತ್ಯಲೋಕಕ್ಕೆ ಕೊಡುಗೆ ಕೊಡಬೇಕೆಂದು ಬರೆಯುವ ಬದಲು ನಮ್ಮ ಗ್ರಾಮೀಣ ಯುವಕ ಯುವತಿಯರ ಬದುಕು ಮತ್ತು ತಾತ್ವಿಕ ಚಿಂತನೆಗಳು ಯಾವ ಕಡೆಗೆ ಸಾಗುತ್ತಿವೆ ಎಂದು ಆಲೋಚಿಸಬೇಕಾದ ಅನಿವಾರ್ಯತೆ ನಮಗಿದೆ.

ಮೂಲಭೂತವಾಗಿ ವೈದಿಕರು ತನ್ನ ಶ್ರೇಷ್ಠತೆಯ ಮೂಲಕ ಯಾವಾಗ ಶಿಕ್ಷಿತರಾಗಲು ಪ್ರಾರಂಭಿಸಿದರೋ ಅಂದಿನಿಂದ ಶಿಕ್ಷಣ ಕ್ರಮ ಪ್ರಾರಂಭವಾಯಿತು ಎಂದು ಹೇಳುತ್ತಾರೆ. ಶಿಕ್ಷಣ ಎನ್ನುವುದು ತಳ ಸಮುದಾಯಕ್ಕೆ ತಾನು ಕಲಿತ ಕೌಶಲ್ಯದ ಆಧಾರದ ಮೇಲೆ ತೀರ್ಮಾನವಾಗುತ್ತಿತ್ತು. ಆದರೆ ಮೂಲಭೂತವಾದಿಗಳ ಅದನ್ನು ತಿರಸ್ಕರಿಸುತ್ತಾ, ವೈದಿಕ ಶಿಕ್ಷಣವೇ ಮೂಲ ಶಿಕ್ಷಣವೆಂದು ಎಲ್ಲರಿಗೂ ನಂಬಿಸಲಾರಂಭಿಸಿದರು. ಅಂತಹ ಸಿದ್ಧಮಾದರಿಯ ನಿಲುವುಗಳನ್ನೇ ನಾವು ನಿಜವೆಂದು ತಿಳಿದು ಅವುಗಳ ಸುತ್ತಲು ಇಂದಿಗೂ ಸುತ್ತುತ್ತಲೇ ಇರುವುದು ವಿದ್ಯಾರ್ಥಿಗಳ ಇಂದಿನ ಶಿಕ್ಷಣ ಕ್ರಮಗಳಾಗಿವೆ. ಇದರಿಂದಾಗಿ ಭವಿಷತ್ತಿನ ಶಿಕ್ಷಣ ಮಾದರಿಯನ್ನು ಗುರುತಿಸುವುದು ಕಷ್ಟಕರವಾಗಿದೆ. ಇದರ ಮೂಲವೇ ನಾವುಗಳು ಸಿದ್ಧಪಠ್ಯಕ್ರಮದ ಹುಳುಗಳಾಗಿದ್ದು, ಅದರಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಎಂದರೆ ತಪ್ಪಾಗಲಾರದು.

ಬಾಬಾಸಾಹೇಬ್ ಡಾ. ಅಂಬೇಡ್ಕರರು ಎಂದಿಗೂ ಸಿದ್ಧಮಾದರಿಯ ಪಠ್ಯಕ್ರಮವನ್ನಾಗಲಿ, ವೈದಿಕ ಪರಂಪರೆಯ ಶಿಕ್ಷಣ ಕ್ರಮವನ್ನಾಗಲಿ ನಿಜವೆಂದು ತಿಳಿದು ಸುಮ್ಮನೆ ಕುಳಿತವರಲ್ಲಾ. ಅದನ್ನು ಮೀರಿ ತಮ್ಮ ಆಲೋಚನೆಗಳಿಗೂ ನಿಲುಕದ ರೀತಿಯಲ್ಲಿ ತಮ್ಮನ್ನು ತಾವು ವಿಸ್ತರಿಸಿಕೊಳ್ಳುತ್ತಾ ಹೊಸ ಆಧುನಿಕ ಜಗತ್ತಿನ ಕಡೆಗೆ ಮುಖಮಾಡಿ ನಿಲ್ಲತೊಡಗಿದರು, ಮುಂದಿನ ನವಭಾರತದ ಆಧುನಿಕ ಶಿಕ್ಷಣ ಪ್ರಜ್ಞೆ ಎಂಬುದು ಎಲ್ಲರಿಗೂ ಭವಿಷತ್ತಿನಲ್ಲಿ ಭದ್ರಬುನಾದಿಯಾಗಬೇಕು. ಆಧುನಿಕ ಶಿಕ್ಷಣ ಕ್ರಮವು ಯುವಕರಿಗೆ ಜೀವನದ ಭದ್ರತೆಯಾಗಬೇಕೆಂದು ಮನಗಂಡಿದ್ದರು. ಬಾಬಾಸಾಹೇಬರೇ ಹೇಳುವಂತೆ ಸಿದ್ಧಮಾದರಿಯ ಪಠ್ಯಕ್ರಮದಲ್ಲಿನ ಇತಿಹಾಸದ ಪುಟಗಳು ಕೇವಲ ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವ ಪುಟಗಳಾಗಿವೆಯೇ ಹೊರತು ಮತ್ತೇನು ಅಲ್ಲಾ, ನಾವುಗಳು ನಿಜವಾದ ಇತಿಹಾಸವನ್ನು ಅರಿಯಬೇಕಾದರೆ ಇತಿಹಾಸದ ಪುಟಗಳ ಪ್ರತೀ ಎರಡು ಸಾಲುಗಳ ಮದ್ಯದಲ್ಲಿ ಸತ್ಯತೆಯನ್ನು ಅಡಗಿಸಿಡಲಾಗಿದೆ. ಆ ಸತ್ಯತೆಯನ್ನು ತಿಳಿಯಬೇಕಾದರೆ ಗಾಢವಾದ ಅಧ್ಯಯನ ಬಹಳ ಮುಖ್ಯವಾದದ್ದು ಎಂದಿದ್ದಾರೆ.

ನಮ್ಮ ಇಂದಿನ ಯುವ ಮಿತ್ರರು ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೊಸದೊಂದು ಇತಿಹಾಸವನ್ನು ಸೃಷ್ಟಿಸುವ ಸಾಹಸಕ್ಕೆ ಕೈ ಹಾಕಿ, ಸಿದ್ಧಮಾದರಿಯ ವೈದಿಕ (ಅವೈಜ್ಞಾನಿಕ) ಪರಂಪರೆಯ ಆಚರಣೆಗಳು ಮತ್ತು ಅಂದಿನ ಮೂಢನಂಬಿಕೆಯಿಂದ ಹೊರಬರಬೇಕಾಗಿದೆ. ಮಾನಸಿಕ ಪಕ್ವತೆಯ ಜೊತೆಗೆ ನಿರ್ದಿಷ್ಠ ವಿಚಾರಗಳಿಂದ ಹೊಸತನವನ್ನು ಕಟ್ಟಬೇಕಾದ ಅನಿವಾರ್ಯತೆ ಇಂದಿನ ಓದುಗರಲ್ಲಿರಬೇಕಾಗಿದೆ. ಬಾಬಾಸಾಹೇಬರು ಹೇಳಿದ್ದು ಇದನ್ನೇ ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರರು ಹೀಗೆ ಹೊಸ ಇತಿಹಾಸ ಸೃಷ್ಟಿಸುವಲ್ಲಿ ಆಧುನಿಕ ಜಗತ್ತಿಗೆ ಮುಖ ಮಾಡಿ ನಿಲ್ಲಬೇಕಾದ ಪರಿಸ್ಥಿತಿಯನ್ನು ನಮ್ಮ ಯುವಕರಲ್ಲಿ ಕಾಣಬೇಕಾಗಿದೆ.

ಆಧುನಿಕ ಶಿಕ್ಷಣ ಪದ್ದತಿಯು ಹೊಸ ತಲೆಮಾರಿನ ಯುವಕರನ್ನು ಸಿದ್ಧಮಾದರಿಯ ಶಿಕ್ಷಣ ವ್ಯವಸ್ಥೆಯೊಳಗಿನಿಂದ ಬಿಡುಗಡೆಗೊಳಿಸಿ ಹೊಸ ಬದುಕನ್ನು ಕಟ್ಟಿಕೊಡುತ್ತದೆ ಎನ್ನುವುದು ಕೇವಲ ಮಾನಸಿಕ ಭೂತವಾಗಿರುವು ನವ ತರುಣರ ಮತ್ತು ಪೋಷಕರ ಕಣ್ಣುಗಳಲ್ಲಿನ ಕನಸುಗಳಾಗಿವೆ. ಇವು ಗ್ರಾಮೀಣ ಜಗತ್ತಿನಿಂದ ನಗರದ ಬದುಕಿಗೆ ಜಿಗಿಯುವ ಜೀವನ ಶೈಲಿಯ ಪಲ್ಲಟಗಳಾಗಿದ್ದು, ಇಂದು ಶಿಕ್ಷಣವೂ ಸಹ ಹೊಸ ಮಾದರಿಯಾಗಿ ಪರಿವರ್ತನೆಗೊಂಡು ಸಿದ್ಧ ಮಾದರಿಯನ್ನೇ ಒಪ್ಪಿಕೊಳ್ಳುವ ಎಲ್ಲಾ ಹುನ್ನಾರಗಳೆನ್ನಬಹುದು. ಹಾಗೂ ವೈದಿಕ ವ್ಯವಸ್ಥೆಯು ಬಹುಸಂಖ್ಯಾತ ವಿದ್ಯಾರ್ಥಿಗಳ ಮೆದುಳಿಗೆ ಬಲವಂತವಾಗಿ ಏರುತ್ತಿರುವ ಕಟ್ಟಳೆಗಳು ಆಧುನಿಕತೆ ಮತ್ತು ವೈಜ್ಞಾನಿಕತೆಯ ಶಿಕ್ಷಣದ ಕುಂಠಿತಕ್ಕೆ ಕಾರಣವಾಗುತ್ತಿರುವುದು ಬಹಳ ನೋವಿನ ವಿಷಯವಾಗಿದೆ.

ಇಂದಿನ ಶಿಕ್ಷಣ ಕ್ಷೇತ್ರವೂ ಸಹ ಗ್ರಾಮೀಣ ಪ್ರದೇಶದ ಯುವಕ ಯುವತಿಯರಲ್ಲಿ ಆಧುನಿಕ ಆರ್ಥಿಕ ಸಾಧಿತವನ್ನು ನಿಯಂತ್ರಿಸುವ ಮಜಲುಗಳಾಗಿದ್ದು ಉತ್ತಮ ಅರ್ಥವ್ಯವಸ್ಥೆಯ ಕಡೆಗೆ ಮುಖ ಮಾಡುವ ವಿದ್ಯಾರ್ಥಿಗಳಿಗೆ ಸ್ವಉದ್ಯೋಗದ ಪರಿಕಲ್ಪನೆಯನ್ನು ಕಟ್ಟಿಕೊಡುವ ಮೂಲಕ ಅವರ ಆರ್ಥಿಕ ಸಾಧಿತದ ಉನ್ನತ ಹುದ್ದೆಗಳ ಕಡೆಗೆ ( IAS IPS IFS) ಮುಖ ಮಾಡುವ ವ್ಯವಸ್ಥೆಯಾಗಿರದೆ, ತನ್ನ ಜೀವನಾಂಶದ ಆರ್ಥಿಕ ವ್ಯವಸ್ಥೆಗಷ್ಟೇ ಸೀಮಿತಗೊಳಿಸಲಾಗುತ್ತಿದೆ. ಅಲ್ಲದೆ ಹೊಸ ದಿಕ್ಕಿನ ಆರ್ಥಿಕ ಸಾಧನೆಯ ಕೊಂಡಿಯನ್ನು ಕಳಚಿ ತನ್ನನು ತಾನು ಸಿದ್ಧ ಮಾದರಿಯ ವ್ಯವಸ್ಥೆಯೊಳಗೆ ಕಟ್ಟಿಹಾಕಿಕೊಳ್ಳುವಂತೆ ಮಾಡುತ್ತಿದೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ಹಾಗೂ ಮಾಯಾನಗರಿಯಂತಹ ನಗರ ಪ್ರದೇಶದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಲ್ಲಿ ಬೌದ್ಧಿಕವಾಗಿ ವಿಪುಲತೆಯನ್ನು ಕಾಣುವಂತದ್ದಾಗಿದೆ.

ಉದ್ಯೋಗ ಸೃಷ್ಟಿಯ ಹೊಣೆಗಾರಿಕೆ ಸಮಾಜದ ಜವಾಬ್ದಾರಿ ಎಂದು ನಂಬಿಸಿ ಸಂವಿಧಾನಿಕ ಆಶಯಗಳಿಗೆ ಕೊಳ್ಳಿಹಿಡಲಾಗುತ್ತಿದೆ. ಸಂವಿಧಾನಿಕ ಉದ್ಯೋಗವೆಂಬುದು ಎಲ್ಲಾ ಜನರ ಜೀವನ ಪದ್ದತಿಯ ಒಂದು ಭಾಗವಾದರೆ, ಶೋಷಿತರಿಗೆ ಸಾಮಾಜಿಕ ಶೋಷಣೆಯಿಂದ ಬಿಡುಗಡೆಯಾಗುವ ಒಂದು ಆಯಾಮದ ಜೊತೆಗೆ ಆರ್ಥಿಕ ಭದ್ರತೆಯಾಗಿದೆ.ತರಬೇತಿ ಎಂಬುದು ಕೇವಲ ಜೀವನ ಶೈಲಿಯ ಒಂದು ಮಾರ್ಗವಾಗಿರಬೇಕು ಅದರಿಂದಲೇ ಆರ್ಥಿಕ ಸಾಧನೆ ಅಥವಾ ಹಿಡಿತ ಎಂಬುದು ಗ್ರಾಮೀಣ ಭಾಗದ ಯುವಜನತೆಗೆ ಕಗ್ಗಂಟಾಗಿದ್ದು, ಕೇವಲ ಬೆರಳೆಣಿಕೆಯಷ್ಟು ಜನರ ಜೀವನದ ಯಶಸ್ಸಾಗಿದೆ. ನೂತನ ಕನಸುಗಳನ್ನೊತ್ತು ಮಾಯಾನಗರಿಯ ಉದರದೊಳಗೆ ನುಸುಳಿದ ಗ್ರಾಮೀಣ ನಿರುದ್ಯೋಗ ಯುವಕರು ಆಧುನಿಕತೆಯ ಕೈಗಾರಿಕೀಕರಣ ಹಾಗೂ ಹೊಸ ಆರ್ಥಿಕ ನೀತಿಯ ಪರಿಣಾಮದಿಂದ ತತ್ತರಿಸಿ ಇಂದಿಗೂ ಕೂಲಿಕಾರ್ಮಿಕರಾಗಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಯುವಕರ ಮನಸ್ಥಿತಿಗಳು ಪಲ್ಲಟಗೊಳ್ಳಲಾರಂಭಿಸುತ್ತಿವೆ.

ಇಂದಿನ ಆರ್ಥಿಕ, ರಾಜಕೀಯ, ಸಾಮಾಜಿಕ, ಸ್ಥಿತಿಗತಿಗಳ ವ್ಯವಸ್ಥೆಯೊಳಗೆ ಸಂವಿಧಾನಿಕ ಅಧಿಕಾರವೆಂಬುದು ಕೇವಲ ಮರೀಚಿಕೆಯಾಗುತ್ತಿದೆ. COVID19 ಎನ್ನುವ ಮಹಾಮಾರಿಯು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆಯನ್ನು ತಲ್ಲಣಗೊಳಿಸಿ ಶೇಕಡಾ 50% ಕ್ಕೂ ಹೆಚ್ಚು ಯುವಕರು ನಿರುದ್ಯೋಗಿಗಳಾಗುವ ವ್ಯವಸ್ಥೆ ರೂಪುಗೊಂಡಿದೆ. ಹೊಸ ಕನಸುಗಳನ್ನೊತ್ತು ಮಕ್ಕಳ ಭವಿಷ್ಯವನ್ನು ಆಧುನಿಕ ಅರ್ಥವ್ಯವಸ್ಥೆಯ ಕಡೆಗೆ ಸಾಗಿಸಬೇಕೆಂದು ಪಣತೊಟ್ಟ ಪೋಷಕರು ಕೈಚೆಲ್ಲಿ ನಿರಾಶಾವಾದಿಗಳಂತೆ ಕೂರುವ ವ್ಯವಸ್ಥೆ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಮಾಜಿಕ ಬಧ್ರತೆಯಿಲ್ಲದೆ,ಆರ್ಥಿಕ ನೆರವಿಲ್ಲದೆ ಬದುಕುವುದನ್ನು ಕಾಣಬಹುದಾಗಿದೆ. ಇತ್ತೀಚೆಗೆ ಗ್ರಾಮೀಣ ಯುವಕರು ತನ್ನ ಪ್ರಭುದ್ದತೆಯ ಮೂಲಕ ಹೊಸ ಚಿಂತನೆಗಳನ್ನು ಮಾಡಬೇಕಾದವರು ಬೇರೊಂದು ಕಡೆಗೆ ಮುಖ ಮಾಡಿ ನಿಲ್ಲುವುದು ಬಹಳ ಅಪಾಯಕಾರಿಯಾದ ವ್ಯವಸ್ಥೆಯಾಗಿದೆ.

ಬಾಬಾಸಾಹೇಬರು ಹೇಳಿರುವಂತೆ ಜಡ್ಡು ಹಿಡಿದು ಕೊಳೆತು ನಾರುತ್ತಿರುವ ಹಳೆಯ ಸಿದ್ಧ ವ್ಯವಸ್ಥೆಯಿಂದ, ಹಾಗೂ ಮಾನಸಿಕ ಗುಲಾಮಗಿರಿತನದಿಂದ ಹೊರಗಡೆ ಬರಬೇಕಾಗಿದೆ. ಹಾಗೆಂದ ಮಾತ್ರಕ್ಕೆ ಮಾಯಾನಗರಿಯಂತಹ ನಗರಗಳಿಗೆ ವಲಸೆ ಬರುವುದಲ್ಲಾ !! ಮಾಯಾನಗರಿ ಎಂಬುದು ಬಂಡವಾಳ ಶಾಹಿಗಳ ಕಪಿ ಮುಷ್ಠಿಯ ಬದುಕಾಗಿದೆಯೇ ಹೊರತು, ತಳ ಸಮುದಾಯದ ಅಭಿವೃದ್ಧಿಯ ಸೂಚಕವಲ್ಲಾ !! ಅದು ಮತ್ತೆ ಕಾರ್ಮಿಕ ಪದ್ಧತಿ ಅಥವಾ ಆಧುನಿಕ ಜೀತ ಪದ್ದತಿಯ ಕ್ರಮವೇ ಆಗಿದೆ. ಜಡ್ಡು ಹಿಡಿದ (ಜಾತಿ, ಧರ್ಮ, ನಾಡ ಗೌಡ ಸ್ಯಾನುಭೋಗ,ಪಟೇಲ,ಊರಿನ ಐನೋರು) ವ್ಯವಸ್ಥೆಯಿಂದ ಹೊರ ಬರುವುದು ಎಂದಿದ್ದಾರೆ. ನಮ್ಮ ಸಿದ್ಧ ಮಾದರಿಯ ವ್ಯವಸ್ಥೆಯನ್ನು ವರ್ತಮಾನದಲ್ಲಿ ಅಳವಡಿಸುವಾಗ ಭವಿಷತ್ತಿನ ಸಮುದಾಯಕ್ಕೆ ಅದು ಬಿಡುಗಡೆಯ ಸೂಚಕವಾಗಬೇಕು ಎಂದಿದ್ದಾರೆ. ನಾಡಹಬ್ಬ, ಕುಲದೇವತೆ, ಪೌರೋಹಿತ್ಯ ಇದರಲ್ಲಿಯೇ ಮಾನಸಿಕ ತೊಳಲಾಟಕ್ಕೆ ಸಿಲುಕಿ ನಲುಗುವ ವ್ಯವಸ್ಥೆಯನ್ನು ಹೊಡೆದು, ಭವಿಷ್ಯತ್ತಿಗೆ ಹೊಸ ಮಾದರಿಯ ನಿಲುವನ್ನು ತಾಳಬೇಕಾಗಿದೆ. ಇಂದಿನ ವಿದ್ಯಾವಂತ ಯುವಕರು ಇದರಿಂದ ಹೊರತೇನಲ್ಲಾ !!! ಗ್ರಾಮೀಣ ಭಾಗದಲ್ಲಿ ಜಾತಿಯ ಸಂಕೋಲೆಗಳು ಹೇಗೆ ತನ್ನ ಪ್ರಭುತ್ವದ ಹಿಡಿತವನ್ನು ಸಾಧಿಸುತ್ತಿವೆ ಎನ್ನುವುದನ್ನು ಇವತ್ತಿಗೂ ಕಾಣಬಹುದಾಗಿದೆ.

ಕೆ ಪಿ ಪೂರ್ಣಚಂದ್ರತೇಜಸ್ವಿ ಹೇಳುವಂತೆ “ಇಂದಿನ ವಿದ್ಯಾವಂತ ಯುವಕರು ತನ್ನ ಹೆಸರುಗಳ ಮುಂದೆ ತನ್ನ ಜಾತಿಯನ್ನು ಪ್ರತಿಬಿಂಬಿಸುತ್ತಿರುವುದು ಸಮಾಜಕ್ಕೆ ತುಂಬಾ ಅಪಾಯಕಾರಿಯಾದ ಬೆಳವಣಿಗೆಯೇ ಹೊರತು ಅಭಿವೃದ್ಧಿಯ ಸಂಕೇತವಲ್ಲ” ಎಂದಿದ್ದಾರೆ. ಆದರೂ ಇಂದಿನ ವಿದ್ಯಾವಂತ ಯುವಕರು ತನ್ನ ಹೆಸರಿನ ಮುಂದೆ ಜಾತಿಯನ್ನು ಬಿಂಬಿಸುತ್ತಾ ಮುಖ್ಯ ವಾಹಿನಿಯಲ್ಲಿ ತನ್ನನ್ನು ತಾನು ವಿಸ್ತರಿಸಿಕೊಂಡು ಯಶಸ್ಸನ್ನು ಕಾಣಲು ಹೊರಡುವುದು ಬಹಳ ಅಪಾಯಕಾರಿಯಾಗಿರುವುದಲ್ಲದೆ, ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡುವುದರ ಜೊತೆಗೆ ಜಾತಿಯ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಅಧಿಕಾರವನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವ ಹುನ್ನಾರವಾಗಿದೆ. “ಕುವೆಂಪು, ತೇಜಸ್ವಿ, ಎಲ್ ಎನ್ ಮುಕುಂದರಾಜ್, ಯುವ ನಾಯಕರಾದ ಡಾ.ಹೆಚ್.ತುಕಾರಾಂ ಜಾತಿಯ ನಾಮಫಲಕಗಳಿಂದ ಹೊರಬಂದು ಸಮಾಜದೊಡನೆ ಬೆರೆಯುವ ಮೂಲಕ ಆದರ್ಶವಾಗಿದ್ದಾರೆ”. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ಯಾವಂತ ಯುವಪೀಳಿಗೆ ಉದಾ : ಬಿಗ್ ಬಾಸ್ ಗೆ ಬಂದ ನಿವೇದಿತಾ ನಂತರ ನಿವೇದಿತಾಗೌಡ , ಅನುಪಮಾ ಆಗಿ ಬಂದ ಹುಡುಗಿ ಅನುಪಮಾಗೌಡ, ಚಂದನ್ ಆಗಿ ಬಂದ ಹುಡುಗ ಚಂದನ್ ಶೆಟ್ಟಿ, ಹೀಗೆ ಶಾಸ್ತ್ರೀ, ಭಟ್, ಅಯ್ಯಂಗಾರ್, ಕುಲಕರ್ಣಿ, ಪೈ, ಕಾಮತ್ ಹೀಗೆ ತನ್ನ ಜಾತಿಯ ಶ್ರೇಷ್ಠತೆಯನ್ನು ಸಮಾಜದಲ್ಲಿ ಬಿಂಬಿಸುತ್ತಾ, ಇವೆಲ್ಲವುಗಳೂ ವರ್ಣಾಶ್ರಮವನ್ನು ಹಾಗೆಯೇ ಕಾಪಾಡುವುದು ಆಧುನಿಕ ಮಾದರಿಯ ಆಯಾಮವಾಗಿವೆ.ಇಂದಿನ ಯುವ ಪೀಳಿಗೆಯು ತನ್ನ ಓದಿನ ಕ್ರಮದಲ್ಲಿ ಆಗಬೇಕಾದ ಬದಲಾವಣೆ ಒಂದು ಕಡೆಯಾದರೆ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಸೃಷ್ಟಿಸುವ ಮತ್ತು ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ.

ಇವುಗಳು ಸಮಾಜದಲ್ಲಿ ಬದಲಾವಣೆಯನ್ನು ಬಯಸುವುದಕ್ಕಿಂದ ಜಾತಿಯ ಶ್ರೇಷ್ಠತೆಯನ್ನು, ಪಟ್ಟಭದ್ರಹಿತಾಶಕ್ತಿಯ ಜೊತೆಗೆ ಅಧಿಕಾರದ ಶಕ್ತಿಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಡುವುದಾಗಿದೆ. ಇದನ್ನೇ ಕುವೆಂಪುರವರು ಹೇಳಿದ್ದು ಓದಿನ ಕ್ರಮವು ಬದಲಾಗಬೇಕು.ಸಮಾಜದ ಕಟ್ಟುಪಾಡುಗಳನ್ನು ವರ್ತಮಾನದಲ್ಲಿ ಚಿಂತಿಸಿ ಭವಿಷತ್ತಿಗೆ ಪೂರಕವಾಗುವಂತೆ ಬದಲಾಯಿಸಬೇಕು, ವಿಜ್ಞಾನದ ಶಿಕ್ಷಕ ವಿಜ್ಞಾನದ ಅರಿವನ್ನು ಭವಿಷತ್ತಿಗೆ ತಿಳಿಹೇಳಬೇಕು ಆಗಲೇ ಯುವಜನತೆಯ ಆಲೋಚನೆಯ ಕ್ರಮ ಬದಲಾಗಬಹುದು. ಮಗು ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತಿದ್ದೇವೆ, ಮತ್ತೆ ವಿಶ್ವಮಾನವನಾಗಬೇಕಾದರೆ ಉತ್ತಮ ವೈಚಾರಿಕ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಈ ನಿಟ್ಟಿನಲ್ಲಿ ನಾವು ಚಿಂತಿಸಬೇಕಾಗಿದೆ. ಮಕ್ಕಳಲ್ಲಿ ಕೇವಲ ವೈಜ್ಞಾನಿಕ ನಿಲುವು , ವೈಚಾರಿಕ ಮನೋಭಾವ, ತಾಂತ್ರಿಕ ವಿದ್ಯಾಭ್ಯಾಸ, ಸಮ ಸಮಾಜದ ಬಗೆಗಿನ ಕಾಳಜಿ, ಇವುಗಳನ್ನು ನಾವು ತಿಳಿಸಬೇಕಾಗಿದೆ. ಆಧುನಿಕ ವ್ಯವಸ್ಥೆಯೊಳಗೆ ತನ್ನನ್ನು ತಾನು ತೊಡಗಿಸಿಕೊಂಡು ಜಾತಿ, ಧರ್ಮ,ಕುಲ,ದೈವ, ಇವೆಲ್ಲದರಿಂದಲೂ ಹೊರ ಬಂದು ಭವಿಷತ್ತಿನ ಪ್ರಜೆಯಾಗಿ ಬದುಕನ್ನು ಕಟ್ಟುಕೊಳ್ಳಬೇಕಾಗಿದೆ.
ಮತ ಮನುಜಮತವಾಗಬೇಕು
ಪಥ ವಿಶ್ವಪಥವಾಗಬೇಕು
ಮಾನವ ವಿಶ್ವಮಾನವನಾಗಬೇಕು ,
ಯುವಜನತೆಯು ಈ ಆಲೋಚನೆಯನ್ನು ಆಧುನಿಕ ಜಗತ್ತಿಗೆ ವರ್ತಮಾನದಲ್ಲಿ ನಿಂತು ಚಿಂತಿಸಿ ಭವಿಷತ್ತಿನ ಜೀವನ ಕ್ರಮವನ್ನು ರೂಪಿಸಬೇಕಾದ ಅನಿವಾರ್ಯತೆ ನಮ್ಮ ಯುವಕರ ಮೇಲಿದೆ.

ಹೊಸ ಆಯಾಮಗಳ ಚಿಂತಕರಾದ ಡಾ. ಡಾಮಿನಿಕ್ ರವರು ಹೇಳುವಂತೆ ಯುವ ಪೀಳಿಗೆಯು ಸಿದ್ಧ ಮಾದರಿಯ ಶಿಕ್ಷಣ ಕ್ರಮವನ್ನು ಅನುಸರಿಸಿ ತನ್ನ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಬದಲು ವರ್ತಮಾನದ ಸದ್ಯದ ಪರಿಸ್ಥಿತಿಯನ್ನು ಅಧ್ಯಯನ ಮಾಡಬೇಕು, ಭವಿಷತ್ತಿಗೆ ಅವುಗಳು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಯ ಹಾಗೂ ಭದ್ರತೆಯ ಸಾಧನಗಳಾಗಬೇಕು.ಅಂದು ಸಮಾಜದ ತಳ ಸಮುದಾಯಗಳು ತನ್ನ ತನವನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದಿದ್ದಾರೆ.ಈ ರೀತಿಯ ಓದಿನ ಕ್ರಮದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎನ್ನುವುದು ಚಿಂತಕರ ಅಭಿಪ್ರಾಯವಾಗಿದೆ.

ಬಾಬಾಸಾಹೇಬರು ಹೇಳುವಂತೆ ಯುವಕರು ಈ ಪ್ರಬುದ್ಧ ಭಾರತದ ನಿರ್ಮಾಣಕಾರರು, ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಬದಲಾವಣೆಯ ತೀರ್ಮಾನಗಳು ಇಂದಿನ ಯುವಜನತೆಯ ಮೇಲಿದೆ ಎಂದಿರುವ ಮಾತು ಇಂದಿಗೂ ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತದೆ.

Dear brothers and sisters
Today you are the students
But tomorrow you are the nation builders.

–Babasaheb Dr.Ambedkar


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ