ಸಾರಾಯಿ ಎಂದು ಭಾವಿಸಿ ಸ್ಪಿರಿಟ್ ಸೇವನೆ: ಇಬ್ಬರು ಸಾವು, ಒಬ್ಬನ ಸ್ಥಿತಿ ಗಂಭೀರ | ಸ್ಪಿರಿಟ್ ಸಿಕ್ಕಿದ್ದು ಹೇಗೆ? - Mahanayaka
8:18 AM Tuesday 10 - February 2026

ಸಾರಾಯಿ ಎಂದು ಭಾವಿಸಿ ಸ್ಪಿರಿಟ್ ಸೇವನೆ: ಇಬ್ಬರು ಸಾವು, ಒಬ್ಬನ ಸ್ಥಿತಿ ಗಂಭೀರ | ಸ್ಪಿರಿಟ್ ಸಿಕ್ಕಿದ್ದು ಹೇಗೆ?

koppal news
09/02/2026

ಕೊಪ್ಪಳ: ಸಾರಾಯಿ ಎಂದು ಭಾವಿಸಿ ಸ್ಪಿರಿಟ್ ಸೇವಿಸಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತರನ್ನು ಕೂಕನಪಳ್ಳಿ ಗ್ರಾಮದ ಅಮರಯ್ಯ ಹಿರೇಮಠ (35) ಹಾಗೂ ರಮೇಶ ಹೊಸಹಳ್ಳಿ (25) ಎಂದು ಗುರುತಿಸಲಾಗಿದೆ.  ಶರಣಪ್ಪ ಹಂಚಿನಾಳ ಎಂಬ ಯುವಕನಿಗೆ ಗಂಭೀರ ಸ್ಥಿತಿ ಉಂಟಾಗಿದೆ. ಅಮರಯ್ಯ ಜೆಸ್ಕಾಂ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ರಮೇಶ ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದನೆಂದು ತಿಳಿದುಬಂದಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

ಘಟನೆಯ ವಿವರ:

ಫೆಬ್ರವರಿ 4ರಂದು ಕೂಕನಪಳ್ಳಿ ಗ್ರಾಮದ ಜಮೀನೊಂದರಲ್ಲಿ ಐವರು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ದದೇಗಲ್ ಗ್ರಾಮದ ವಾಟರ್ ಸರ್ವಿಸ್ ನಡೆಸುತ್ತಿದ್ದ ಮಾರುತಿ ಬಂಡಿ ಸಾರಾಯಿ ಎಂದು ಹೇಳಿ ಸ್ಪಿರಿಟ್ ತಂದಿದ್ದಾನೆ ಎಂದು ಆರೋಪಿಸಲಾಗಿದೆ. ಅವನ ಮಾತು ನಂಬಿದ ಅಮರಯ್ಯ ಹಿರೇಮಠ, ರಮೇಶ ಹೊಸಹಳ್ಳಿ ಹಾಗೂ ಶರಣಪ್ಪ ಹಂಚಿನಾಳ ಸ್ಪಿರಿಟ್ ಸೇವಿಸಿದ್ದಾರೆ.

ಸ್ಪಿರಿಟ್ ಸೇವಿಸಿದ ಕೆಲವೇ ಸಮಯದಲ್ಲಿ ಮೂವರು ಅಸ್ವಸ್ಥಗೊಂಡಿದ್ದು, ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಮರಯ್ಯ ಹಿರೇಮಠ ಹಾಗೂ ಶರಣಪ್ಪ ಹಂಚಿನಾಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅಮರಯ್ಯ ಹಿರೇಮಠ ಮೃತಪಟ್ಟಿದ್ದಾರೆ.

ಬಳಿಕ ರಮೇಶ ಹೊಸಹಳ್ಳಿ ಕೂಡ ಅಸ್ವಸ್ಥಗೊಂಡು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಪೊಲೀಸರು ನೀಡಿದ ಮಾಹಿತಿಯಂತೆ, ಅಮರಯ್ಯ ಮೃತಪಟ್ಟ ಬಳಿಕ ಆತಂಕಗೊಂಡ ರಮೇಶ ಪೊಲೀಸ್ ಠಾಣೆಯಿಂದ ಮನೆಗೆ ತೆರಳಿ ಮತ್ತೊಮ್ಮೆ ಅದೇ ಸ್ಪಿರಿಟ್ ಸೇವನೆ ಮಾಡಿದ ಪರಿಣಾಮ ಗಂಭೀರ ಸ್ಥಿತಿ ಉಂಟಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇಬ್ಬರು ವಶಕ್ಕೆ:

ಘಟನೆಗೆ ಸಂಬಂಧಿಸಿದಂತೆ ಸ್ಪಿರಿಟ್ ತಂದಿದ್ದ ಆರೋಪದ ಮೇಲೆ ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಪಿರಿಟ್ ಯಾವ ಮೂಲದಿಂದ ಬಂದಿತ್ತು, ಅದು ಶುದ್ಧ ಸ್ಪಿರಿಟ್‌ ನಲ್ಲವೇ ಅಥವಾ ಯಾವುದಾದರೂ ಮಿಶ್ರಣ ಹೊಂದಿತ್ತೇ ಎಂಬ ಕುರಿತು ತನಿಖೆ ಮುಂದುವರಿದಿದೆ.

ಈ ಸಂಬಂಧ ಮೃತ ರಮೇಶ ಅವರ ತಂದೆ ಯಮನಪ್ಪ ಹೊಸಹಳ್ಳಿ ನೀಡಿದ ದೂರಿನ ಅನ್ವಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ