ಉಳ್ಳಾಲ ಉರೂಸ್: ಕಡಲ ತಡಿಯ ನಾಡು, ಸಾಮರಸ್ಯದ ನೆಲೆಬೀಡು, ಸರ್ವ ಧರ್ಮೀಯರ ಸಂಗಮ!

- ಎನ್.ಎಂ.ಹನೀಫ್, ನಂದರಬೆಟ್ಟು
ಉಳ್ಳಾಲದಲ್ಲಿ ಸಯ್ಯದ್ ಮದನಿ (ಖ.ಸಿ)ರವರ ಹೆಸರಿನಲ್ಲಿ ನಡೆಯುವ ಉರೂಸ್ ಸಮಾರಂಭಕ್ಕೆ ಒಂದು ಬಾರಿ ಭೇಟಿ ಕೊಟ್ಟರೆ ಬದುಕಿನ ಎಲ್ಲಾ ವಿಧದ ಪಾಠವನ್ನು ಇಲ್ಲಿ ನಮಗೆ ಕಲಿಯಲು ಸಾಧ್ಯವಾಗುತ್ತದೆ. ಜಾತಿ, ಧರ್ಮ,ಮತ, ಭೇದ ಯಾವುದೂ ಇಲ್ಲದೆ ಅಷ್ಠ ದಿಕ್ಕುಗಳಿಂದಲೂ ಜನರು ಇಲ್ಲಿಗೆ ಸಾಗರೋಪಾದಿಯಾಗಿ ಹರಿದು ಬರುತ್ತಾರೆ. ಇಲ್ಲಿ ದಣಿವರಿದು ಬಂದ ಜನತೆಯ ಬಾಯಾರಿಕೆ ನೀಗಿಸಲು ಕೈ ಬೀಸಿ ಕರೆದು ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ ನಿರಂತರವಾಗಿ ತಂಪು ಪಾನೀಯ ನೀಡುವ ಸ್ವಯಂ ಸೇವಕರ ಕಾರ್ಯವಂತೂ ಎಲ್ಲರ ಮನ ಗೆದ್ದಿದೆ. ಇಲ್ಲಿನ ಬೀದಿ ಬದಿಯಲ್ಲಿರುವ ಅಂಗಡಿಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು ಎಲ್ಲಾ ಜಾತಿ ಧರ್ಮದ ವ್ಯಾಪಾರ ಕೇಂದ್ರಗಳು ನಮಗೆ ಕಾಣ ಸಿಗುತ್ತದೆ. ಒಂದು ಜಾತಿ ಸಮುದಾಯದ ಜನರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಎಂದು ಬೋರ್ಡ್ ಅಳವಡಿಸುವವರು ಉಳ್ಳಾಲ ಉರೂಸ್ ಸಮಾರಂಭದಿಂದ ಕಲಿಯಬೇಕಾದದ್ದು ಬಹಳಷ್ಟಿದೆ.
ದಾರಿಯಲ್ಲಿ ಅಲ್ಲಲ್ಲಿ ದುಡಿದು ತಿನ್ನಲು ಅಸಾಧ್ಯವಾದ ಭಿಕ್ಷುಕರು ತಟ್ಟೆ ಹಿಡಿದು ಕುಳಿತಿದ್ದಾರೆ, ಅವರೆಲ್ಲರ ತಟ್ಟೆಗಳು ಹಣದಿಂದ ತುಂಬಿಕೊಂಡಿದೆ ಯಾಕೆಂದರೆ, ಇಲ್ಲಿಗೆ ಬರುವ ಯಾತ್ರಾರ್ಥಿಗಳು ದಾನ-ಧರ್ಮದ ಮಹತ್ವವನ್ನು ಅರಿತ ವಿಶಾಲ ಹೃದಯದವರಾಗಿದ್ದಾರೆ. ಎಂಬುದಕ್ಕೆ ಇದೊಂದು ನೇರ ನಿದರ್ಶನವಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಸ್ವಯಂ ಸೇವಕರಲ್ಲೂ ದ್ವೇಷ, ಆವೇಶ, ಕೋಪ, ಅಸೂಯೆ, ಅಹಂಕಾರ ಯಾವುದೂ ಇಲ್ಲದೆ, ಎಲ್ಲರನ್ನೂ ಪ್ರೀತಿಯಿಂದ ನಗುಮುಖದೊಂದಿಗೆ ಸ್ವಾಗತಿಸುತ್ತಾರೆ.
ದರ್ಗಾ ಸಂದರ್ಶಿಸಲು ಹೋಗುವಾಗ ನಾವು ಕಾಲಿಗೆ ಹಾಕುವ ಸವೆದು ಹೋದ, ಧೂಳು ಹಿಡಿದ ಚಪ್ಪಲಿಯನ್ನೂ ಕೂಡಾ ಗೋಣಿ ಚೀಲಕ್ಕೆ ತುಂಬಿಸಿ ಸುರಕ್ಷಿತವಾಗಿ ನಮಗೆ ಹಿಂದಿರುಗಿಸುತ್ತಾರೆ ಇಲ್ಲಿನ ಸ್ವಯಂ ಸೇವಕರು! ದರ್ಗಾದ ಎದುರುಗಡೆ ಆಳವಾದ, ಸುಂದರವಾದ ಒಂದು ಕೆರೆ ಇದೆ, ಈ ಕೆರೆಯ ಸಮೀಪಕ್ಕೆ ಹೋದರೆ ಸಾಕು ಅಲ್ಲಿ ನಿಂತಿರುವ ಸ್ವಯಂ ಸೇವಕರು ನಮ್ಮನ್ನು ತಡೆಯುತ್ತಾರೆ. ಯಾಕೆಂದರೆ,ನಾವು ಸುರಕ್ಷಿತವಾಗಿ ಯಾವುದೇ ಅಪಾಯವಿಲ್ಲದೆ ಮನೆಗೆ ತಲುಪಬೇಕು ಎಂಬುದಾಗಿದೆ ಇವರ ಉದ್ದೇಶ. ನಮ್ಮ ಕುರಿತು ಇಷ್ಟೊಂದು ಕಾಳಜಿ ವಹಿಸುವ ಸ್ವಯಂ ಸೇವಕರು ಈ ಉಳ್ಳಾಲದ ಉರೂಸ್ ಸಮಾರಂಭದ ಪುಣ್ಯ ಭೂಮಿಯಲ್ಲಿ ಇದ್ದಾರೆ.
ಇಲ್ಲಿಗೆ ನಾಡಿನ ವಿವಿಧ ಭಾಗದ ಜನರು ಹರಕೆ ಹೊತ್ತ ಆಡುಗಳನ್ನು ತಂದು ಒಪ್ಪಿಸುತ್ತಾರೆ. ಆ ಆಡುಗಳಿಗಾಗಿಯೇ ಪ್ರತ್ಯೇಕ ಸ್ಥಳದ ವ್ಯವಸ್ಥೆಯೂ, ಅದರ ಆರೈಕೆಗೆ, ಆಹಾರ, ನೀರು ಪೂರೈಸಲು ಪ್ರತ್ಯೇಕ ಜನರಿದ್ದಾರೆ. ಇಲ್ಲಿ ಸ್ವಲ್ಪ ಸಮಯ ನಿಂತು ನೋಡಿದರೆ ಸಾಕು ಮೂಖ ಪ್ರಾಣಿಗಳೊಂದಿಗೂ ಯಾವ ರೀತಿ ನಡೆದು ಕೊಳ್ಳಬೇಕು ಎಂಬ ಬದುಕಿನ ಪಾಠ ನಮಗೆ ಗೊತ್ತಾಗುತ್ತದೆ. ಒಂದು ವೇಳೆ ನಮಗೆ ಏನಾದರೂ ಮಾಹಿತಿ ಬೇಕಿದ್ದರೆ, ನಮ್ಮ ಯಾವುದೇ ಬೆಲೆ ಬಾಳುವ ವಸ್ತುಗಳು ಕಳೆದು ಹೋದರೆ,ನಮಗೆ ಸಂಬಂಧಪಟ್ಟ ಯಾರಾದರೂ ಮಿಸ್ಸ್ ಆಗಿದ್ದರೆ ವಿವಿಧ ಭಾಷೆಗಳಲ್ಲಿ ಎಲ್ಲಾ ವರ್ಗದ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಕಟಣೆ ನೀಡುವ ವಿಚಾರಣಾ ಕಚೇರಿ(Enquiry Office)ಇದೆ. ಬಿದ್ದು ಸಿಕ್ಕಿದ ಅದೆಷ್ಟೋ ಅತ್ಯಮೂಲ್ಯ ವಸ್ತುಗಳನ್ನು ಇಲ್ಲಿಗೆ ತಂದು ಒಪ್ಪಿಸುತ್ತಾರೆ. ಇದರಿಂದ ಇಲ್ಲಿಗೆ ಬರುವ ಯಾತ್ರಿಕರು ಪ್ರಾಮಾಣಿಕತೆವುಳ್ಳವರು ಎಂದು ಸಾಬೀತಾಗುವುದರ ಜೊತೆಗೆ ನಮಗೂ ಪ್ರಾಮಾಣಿಕತೆಯ ಪಾಠ ಕಲಿಯಲು ಸಾಧ್ಯವಾಗುತ್ತದೆ.
ಉಳ್ಳಾಲದ ಉರೂಸ್ ಸಮಾರಂಭಕ್ಕೆ ದಿನನಿತ್ಯ ವಿವಿಧ ರಾಜ್ಯದ ಉಲಮಾ ಉಮರಾಗಳು, ರಾಜಕೀಯ ನೇತಾರರು ಮುಖ್ಯ ಅತಿಥಿಗಳಾಗಿ, ಪ್ರಮುಖ ಭಾಷಣಗಾರರಾಗಿ ಆಗಮಿಸುತ್ತಾರೆ. ಆದರೆ, ಇದುವರೆಗೂ ಯಾವೊಬ್ಬ ವ್ಯಕ್ತಿಯೂ ಕೋಮು ಸಾಮರಸ್ಯವನ್ನು ಕದಡುವ ಮಾತನ್ನು ಆಡಿಲ್ಲ.!! ವೇದಿಕೆ ಸಿಕ್ಕಿದ ಕೂಡಲೇ ಜಾತಿ ನಿಂದನೆ, ವ್ಯಕ್ತಿ ನಿಂದನೆ ಮಾಡುವ ವ್ಯಕ್ತಿಗಳು ಈ ಉಳ್ಳಾಲದ ಸಾಮರಸ್ಯದ ಉರೂಸಿನಿಂದ ಪಾಠ ಕಲಿಯಬೇಕಾಗಿದೆ. ಕಳೆದ ಉರೂಸ್ ಸಮಯದಲ್ಲಿ ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟ ಮತ್ತು ಉಳ್ಳಾಲ ಉರೂಸಿನಲ್ಲಿ ಬೃಹತ್ ಜನಸ್ತೋಮವೇ ಸೇರುವುದರಿಂದ ಕೋವಿಡ್ ವೈರಸ್ ಇನ್ನಷ್ಟು ವ್ಯಾಪಕವಾಗಿ ಹರಡಬಹುದೆಂದು ಅಂದು ಸರ್ಕಾರ ಉರೂಸಿಗೆ ಅನುಮತಿ ನಿರಾಕರಿಸುವ ಪ್ರತಿಕೂಲ ಪರಿಸ್ಥಿತಿ ಇದ್ದರೂ, ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ ಸರಕಾರದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದ ಹಾಜಿ ಅಬ್ದುಲ್ ರಶೀದ್ ನೇತೃತ್ವದ ಅಂದಿನ ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಸಮರ್ಥ ನೇತೃತ್ವ ಜನ ಮನ್ನಣೆಗೆ ಪಾತ್ರವಾಗಿತ್ತು ಎಂಬುದನ್ನು ಮತ್ತೊಮ್ಮೆ ಸ್ಮರಿಸುತ್ತಿದ್ದೇನೆ.
ಈ ಬಾರಿಯೂ ಹನೀಫ್ ಹಾಜಿಯವರ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ, ಸೌಹಾರ್ದಯುತವಾಗಿ ನಡೆಯುತ್ತಿದೆ. ಮೊನ್ನೆ ಕರಾವಳಿ ಭಾಗದಲ್ಲಿ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ, ಸಾರ್ವಜನಿಕ ಹಿತದೃಷ್ಟಿಯಿಂದ, ಸರಕಾರದ ನೀತಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕೆಲವು ದಿನ ತಾತ್ಕಾಲಿಕ ವಿರಾಮವನ್ನು ನೀಡಿದ್ದರೂ, ಈಗ ಮತ್ತೆ ಎಂದಿನಂತೆ ಉರೂಸ್ ಕಾರ್ಯಕ್ರಮವು ಮುಂದುವರಿಯುತ್ತಿದೆ. ಇಲ್ಲಿನ ಮತ್ತೊಂದು ವಿಶಿಷ್ಟವೇನೆಂದರೆ, ಇಲ್ಲಿನ ಸ್ವಯಂ ಸೇವಕರು ಅಂಗವಿಕಲರನ್ನು, ರೋಗಿಗಳನ್ನು, ನಿಶಕ್ತರನ್ನು, ವಯಸ್ಕರನ್ನು ವೀಲ್ ಚೇರ್ ಮೂಲಕ ದರ್ಗಾ ಸಂದರ್ಶನ ಮಾಡಿಸಿ ಅವರಿಗೆ ಬೇಕಾದ ನಿರ್ದಿಷ್ಟ ಸ್ಥಳಕ್ಕೆ ತಲುಪಿಸುವ ರೀತಿ ನಿಜಕ್ಕೂ ಮೆಚ್ಚುವಂತದ್ದೇ. ವಯಸ್ಸಾದ ತಂದೆ–ತಾಯಿಯರನ್ನು ಅನಾಥ ಆಶ್ರಮಕ್ಕೆ ಸೇರಿಸುವ ಮಕ್ಕಳು ಇಲ್ಲಿನ ಪ್ರೀತಿ ತುಂಬಿದ ಸ್ವಯಂ ಸೇವಕ ಸಹೋದರರಿಂದ ಬದುಕಿನ ಪಾಠ ಕಲಿಯಬೇಕಾಗುತ್ತದೆ. ಒಂದು ವೇಳೆ ಸಾಮಾಜಿಕ ಐಕ್ಯತೆಗೆ ಮುನ್ನುಡಿ ಬರೆಯುವುದಾದರೆ ಈ ಉಳ್ಳಾಲ ಉರೂಸಿನಿಂದ ಖಂಡಿತಾ ಸಾಧ್ಯ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: