ಬೌದ್ಧ ಧರ್ಮಕ್ಕೆ ಮರಳಿದ ವಾಲ್ಮೀಕಿ ಸಮುದಾಯದ 236 ಜನರು | ಕಾರ್ಯಕ್ರಮದ ಆಯೋಜಕರಿಗೆ ಪೊಲೀಸರಿಂದ ಕಿರುಕುಳ - Mahanayaka

ಬೌದ್ಧ ಧರ್ಮಕ್ಕೆ ಮರಳಿದ ವಾಲ್ಮೀಕಿ ಸಮುದಾಯದ 236 ಜನರು | ಕಾರ್ಯಕ್ರಮದ ಆಯೋಜಕರಿಗೆ ಪೊಲೀಸರಿಂದ ಕಿರುಕುಳ

24/10/2020

ಗಾಝೀಯಾಬಾದ್: ಉತ್ತರಪ್ರದೇಶದ ಹತ್ರಾಸ್ ನಲ್ಲಿ ವಾಲ್ಮೀಕಿ ಸಮುದಾಯದ ಯುವತಿಯ ಅತ್ಯಾಚಾರ ಹಾಗೂ ಭೀಕರ ಕೊಲೆ ಹಾಗೂ ಈ ಪ್ರಕರಣವನ್ನು ಮುಚ್ಚಿ ಹಾಕಲು ಹಿಂದೂಪರ ಸಂಘಟನೆಗಳು, ಪೊಲೀಸರು, ಸರ್ಕಾರ ಎಲ್ಲರೂ ಒಂದಾಗಿ ಯತ್ನಿಸಿದ ಘಟನೆಯಿಂದ ನೊಂದು ವಾಲ್ಮೀಕಿ ಸಮುದಾಯದ 236 ಜನರು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ, ಇದೀಗ ಈ ಘಟನೆಯಿಂದ ಮುಜುಗರಕ್ಕೀಡಾಗಿರುವ ಯೋಗಿ ಆದಿತ್ಯನಾಥ್ ಸರ್ಕಾರವು ಪೊಲೀಸರನ್ನು ಬಳಸಿ, ಬೌದ್ಧ ಧರ್ಮಕ್ಕೆ ಮರಳಿದವರಿಗೆ ಹಾಗೂ ಸಂಘಟಕರಿಗೆ ಕಿರುಕುಳ ನೀಡಲು ಆರಂಭಿಸಿದೆ.

ಗಾಝಿಯಾಬಾದ್ ನ ಕರೇರಾ ಗ್ರಾಮದಲ್ಲಿ 236 ಜನರು ಮರಳಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿದ್ದರು. ಈ ಘಟನೆಯು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ತೀವ್ರ ಮುಜಗರ ಉಂಟು ಮಾಡಿದೆ. ಹೀಗಾಗಿ ಅವರು ಸಂಘಟಕರ ಬಳಿಯಲ್ಲಿ ಯಾವುದೇ ಧರ್ಮಾಂತರ ನಡೆದಿಲ್ಲ ಎಂದು ಒಪ್ಪಿಕೊಳ್ಳುವಂತೆ ಮತ್ತು ಕ್ಯಾಮರದ ಮುಂದೆ ಹೇಳುವಂತೆ ಒತ್ತಡ ಹಾಕಿದ್ದಾರೆ ಎಂದು ಸಂಘಟಕರು ದೂರಿದ್ದಾರೆ.

ಸಾಮೂಹಿಕ ಧರ್ಮಾಂತರ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಪವನ್ ಎಂಬವರನ್ನು  ಮಂಗಳವಾರ ರಾತ್ರಿ ಪೊಲೀಸರು ಬಲವಂತವಾಗಿ ಸೈದಾಬಾದ್ ಠಾಣೆಗೆ ಕರೆದೊಯ್ದಿದ್ದಾರೆ.  ಬಳಿಕ ಯಾವುದೇ ಧರ್ಮಾಂತರವಾಗಿಲ್ಲ, ರಾಜರತ್ನ ಅಂಬೇಡ್ಕರ್ ಅವರು ಸಭೆಯಲ್ಲಿ ಪಾಲ್ಗೊಳ್ಳಲು ಮಾತ್ರ ಬಂದಿದ್ದರು ಎಂದು ಕ್ಯಾಮರದ ಮುಂದೆ ಹೇಳಲು ಬಲವಂತ ಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಾಲ್ಮೀಕಿ ಸಮುದಾಯದವರು ಸ್ವ ಇಚ್ಛೆಯಿಂದಲೇ ಸೇರ್ಪಡೆಗೊಂಡಿದ್ದರೂ, ಕೆಲವು ಸಂಘಟನೆಗಳು ಸುಳ್ಳು ಸುದ್ದಿಗಳನ್ನು ಹಬ್ಬಿದ್ದು, ಹೆಸರು, ವಿಳಾಸಗಳನ್ನು ಬರೆದು ಯಾರನ್ನು ಬೇಕಾದರೂ ಮತಾಂತರ ಮಾಡಲಾಗುತ್ತಿದೆ ಎಂದು ಗಲಭೆ ಎಬ್ಬಿಸಲು ಸಂಚು ಮಾಡಿದ್ದಾರೆ.

ಇತ್ತೀಚಿನ ಸುದ್ದಿ