ಅತಿ ಕ್ರೂರ ಹಿಂಸೆಗೆ ಗುರಿಯಾಗಿದ್ದ ಇರಾಕಿನ ಮೂವರು ಕೈದಿಗಳಿಗೆ 42 ಮಿಲಿಯನ್ ಡಾಲರ್ ಪರಿಹಾರ ನೀಡಿ: ಅಮೆರಿಕ ಕೋರ್ಟ್ ಆದೇಶ - Mahanayaka

ಅತಿ ಕ್ರೂರ ಹಿಂಸೆಗೆ ಗುರಿಯಾಗಿದ್ದ ಇರಾಕಿನ ಮೂವರು ಕೈದಿಗಳಿಗೆ 42 ಮಿಲಿಯನ್ ಡಾಲರ್ ಪರಿಹಾರ ನೀಡಿ: ಅಮೆರಿಕ ಕೋರ್ಟ್ ಆದೇಶ

13/11/2024

ಕುಖ್ಯಾತ ಅಬು ಗುರೈಬ್ ಜೈಲಿನಲ್ಲಿ ಅತಿ ಕ್ರೂರ ಹಿಂಸೆಗೆ ಗುರಿಯಾಗಿದ್ದ ಇರಾಕಿನ ಮೂವರು ಕೈದಿಗಳಿಗೆ 42 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಅಮೆರಿಕಾದ ನ್ಯಾಯಾಲಯವು ಅಮೆರಿಕದ ರಕ್ಷಣಾ ಗುತ್ತಿಗೆದಾರ ಕಂಪನಿಗೆ ಆದೇಶಿಸಿದೆ. ಈ ಕಂಪನಿಯ ಗುತ್ತಿಗೆದಾರರು ಇರಾಕ್ ನ ಅಬು ಗುರೈಬ್ ಜೈಲಿನಲ್ಲಿ ಕೈದಿಗಳಾಗಿದ್ದವರ ಮೇಲೆ ತನಿಖೆಯ ಹೆಸರಲ್ಲಿ ಅತಿ ಕ್ರೂರವಾಗಿ ನಡಕೊಂಡಿದ್ದರು. 2003ರಲ್ಲಿ ಇರಾಕ್ ಮೇಲೆ ಅಮೆರಿಕ ದಾಳಿ ಮಾಡಿದ ಬಳಿಕ ಅಬು ಗುರೈಬ್ ಜೈಲು ಕುಖ್ಯಾತವಾಗಿತ್ತು.

ಸುಹೇಲ್, ಸಲಾಹ್ ಮತ್ತು ಅಸಾದ್ ಅವರಿಗೆ ಈ ಪರಿಹಾರವನ್ನು ನೀಡಬೇಕು ಎಂದು ಅಮೆರಿಕದ ನ್ಯಾಯಾಲಯ ಸೂಚಿಸಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟ ಕೊನೆಗೊಂಡಂತಾಗಿದೆ.

ಸುಹೇಲ್ ಅವರು ಶಾಲಾ ಪ್ರಿನ್ಸಿಪಾಲರಾಗಿದ್ದರು. ಸಲಾಹ್ ಜರ್ನಲಿಸ್ಟ್ ಆಗಿದ್ದರೆ ಅಸ್ಸಾದ್ ಅವರು ಹಣ್ಣು ಹಂಪಲು ಮಾರಾಟ ಮಾಡುವ ವ್ಯಾಪಾರಿಯಾಗಿದ್ದರು. ಇವರನ್ನು ಅಬು ಗುರೈಬ್ ಜೈಲಿನಲ್ಲಿಟ್ಟು ಅಮೆರಿಕಾದ ರಕ್ಷಣಾ ಇಲಾಖೆಯ ಗುತ್ತಿಗೆದಾರ ಕಂಪನಿಯ ಉದ್ಯೋಗಿಗಳು ತೀವ್ರವಾಗಿ ಹಿಂಸಿಸಿದ್ದಾರೆ ಅನ್ನುವುದು ಸಾಬೀತಾಗಿದೆ. ಇವರ ಮೇಲೆ ಲೈಂಗಿಕ ಹಲ್ಲೆ, ಬೆತ್ತಲೆಯಾಗಿ ನಿಲ್ಲಿಸಿದ್ದು, ವಿದ್ಯುತ್ ಶಾಕ್ ಕೊಟ್ಟದ್ದು, ನಾಯಿಯನ್ನು ಛೂ ಬಿಟ್ಟದ್ದು, ಕೊರಳಿಗೆ ಹಗ್ಗವನ್ನು ಕಟ್ಟಿ ಎಳೆದುಕೊಂಡು ಹೋದದ್ದು, ಮಹಿಳೆಯರ ಒಳ ವಸ್ತ್ರವನ್ನು ಧರಿಸುವಂತೆ ಒತ್ತಡ ಹೇರಿದ್ದು.. ಸಹಿತ ವಿವಿಧ ರೀತಿಯ ಕ್ರೌರ್ಯಗಳನ್ನು ಇವರ ಮೇಲೆ ಎಸಗಲಾಗಿತ್ತು.

2003 ರಲ್ಲಿ ಇವರನ್ನು ಅಬು ಗುರೈಬ್ ಜೈಲಿನಲ್ಲಿಟ್ಟು ಹೀಗೆ ಹಿಂಸಿಸಲಾಗತ್ತಲ್ಲದೆ ಎರಡು ತಿಂಗಳ ಬಳಿಕ ಬಿಡುಗಡೆಗೊಳಿಸಲಾಗಿತ್ತು. 2008ರಲ್ಲಿ ಇವರು ತಮ್ಮ ಮೇಲಾದ ಕ್ರೌರ್ಯದ ವಿರುದ್ಧಅಮೇರಿಕಾದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ