ಕುಂಭಮೇಳದಲ್ಲಿ ವಿಎಚ್ ಪಿಯ ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸಭೆ: ಹಿಂದೂ ಕುಟುಂಬಗಳು 3 ಮಕ್ಕಳನ್ನು ಹೊಂದಬೇಕೆಂದು ನಿರ್ಣಯ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕುಂಭಮೇಳದಲ್ಲಿ ವಿಶ್ವ ಹಿಂದೂ ಪರಿಷತ್ ನ ಎರಡು ದಿನಗಳ ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಹಿಂದೂ ಕುಟುಂಬಗಳು 3 ಮಕ್ಕಳನ್ನು ಹೊಂದಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.
ಹಿಂದೂ ಸಮಾಜದ ಜನಸಂಖ್ಯೆಯಲ್ಲಿನ ಅಸಮತೋಲನಕ್ಕೆ ಜನನ ಪ್ರಮಾಣ ಕಡಿಮೆಯಾಗಿರುವುದೇ ಮುಖ್ಯ ಕಾರಣ ಎಂದು ವಿಶ್ವ ಹಿಂದೂ ಪರಿಷತ್ ಹೇಳಿಕೊಂಡಿದ್ದು, ಹಿಂದೂ ಸಮಾಜದ ಅಸ್ತಿತ್ವವನ್ನು ರಕ್ಷಿಸುವುದು ಪ್ರಮುಖ ಜವಾಬ್ದಾರಿಯಾಗಿರುವುದರಿಂದ ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಹೇಳಿದೆ.
ಸಭೆಯಲ್ಲಿ ಮಾತನಾಡಿದ ಜುನಾ ಅಖಾಡಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ, “ಜನಸಂಖ್ಯೆಯಲ್ಲಿನ ಬದಲಾವಣೆಗಳು ಹಿಂದೂಗಳ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ʼಹಮ್ ದೋ ಹಮಾರೆ ದೋʼ ಕೂಡ ಮರೆಯಾಗಿದೆ. ಈಗ ಕನಿಷ್ಠ ಎರಡರಿಂದ ಮೂರು ಮಕ್ಕಳ ಅಗತ್ಯವಿದೆ” ಎಂದು ಹೇಳಿದ್ದಾರೆ.
ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ವಿಎಚ್‌ಪಿ ಈಗಾಗಲೇ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಈಗ ನಮಗೆ ಸಂತ ಸಮುದಾಯದ ಅನುಮೋದನೆ ಮತ್ತು ಬೆಂಬಲ ಸಿಕ್ಕಿದೆ ಎಂದು ಹಿಂದೂ ಸಂತರು ನಂಬುತ್ತಾರೆ ಎಂದು ವಿಎಚ್ ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj