ಚಿರತೆ ಭೀತಿಯಿಂದ ಮನೆಯಿಂದ ಹೊರಬಾರದ ಗ್ರಾಮಸ್ಥರು: ಇನ್ನಷ್ಟು ಭೀತಿ ಸೃಷ್ಟಿಸಿದ ನಕಲಿ ವಿಡಿಯೋ - Mahanayaka
9:05 PM Wednesday 12 - November 2025

ಚಿರತೆ ಭೀತಿಯಿಂದ ಮನೆಯಿಂದ ಹೊರಬಾರದ ಗ್ರಾಮಸ್ಥರು: ಇನ್ನಷ್ಟು ಭೀತಿ ಸೃಷ್ಟಿಸಿದ ನಕಲಿ ವಿಡಿಯೋ

leopard
12/02/2024

ಗದಗ: ಗದಗ ಜಿಲ್ಲೆಯ ಜಿಗೇರಿ, ನಾಗೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಚಿರತೆ ಭೀತಿ ಕಾಣಿಸಿಕೊಂಡಿದ್ದು, ಜನರು ಕೆಲಸಗಳಿಗೆ ತೆರಳದೇ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸುವಂತಾಗಿದೆ.

ಗ್ರಾಮಸ್ಥರು ಮಾತ್ರವಲ್ಲ, ಅರಣ್ಯ ಇಲಾಖೆ ಅಧಿಕಾರಿಗಳು ಕೂಡಾ ನಿದ್ದೆಯಿಲ್ಲದ ರಾತ್ರಿ ಕಳೆಯುವಂತಾಗಿದೆ. ಈ ನಡುವೆ  ಚಿರತೆ ಸಂಚರಿಸುತ್ತಿರುವ ಹಳೆಯ ವಿಡಿಯೋವೊಂದನ್ನು ವೈರಲ್ ಮಾಡಿದ್ದು, ಈ ವಿಡಿಯೋ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.

ಈ ವಿಡಿಯೋ ಹಳೆಯದ್ದಾಗಿದ್ದು, ಹಾಗಾಗಿ ಅದನ್ನು ನಿರ್ಲಕ್ಷಿಸುವಂತೆ ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಶೀಘ್ರವೇ ಚಿರತೆಯನ್ನು ಸೆರೆ ಹಿಡಿಯುವುದಾಗಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ಜಿಗೇರಿ ಮತ್ತು ಸುತ್ತಮುತ್ತಲಿನ ಹೊರವಲಯದಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡು ಬಂದಿವೆ. ಹೀಗಾಗಿ ಅರಣ್ಯಾಧಿಕಾರಿಗಳು ಸುಮಾರು 50 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಆದ್ರೆ ಚಿರತೆ ಸ್ಥಳದಿಂದ ಸ್ಥಳವನ್ನು ಆಗಾಗ ಬದಲಾಯಿಸುತ್ತಲೇ ಇದೆ. ಹೀಗಾಗಿ ಡ್ರೋನ್ ಬಳಸಿ ಚಿರತೆಯ ಹುಡುಕಾಟ ನಡೆಸಲಾಗುತ್ತಿದೆ. ಆದ್ರೆ ಚಿರತೆಯ ಪತ್ತೆಯೇ ಇಲ್ಲವಾಗಿದೆ.

ಚಿರತೆಯ ಭೀತಿಯಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಯಾವುದೇ ಅಂಗಡಿಗಳು ತೆರೆದಿಲ್ಲ, ಹೋಟೆಲ್‌ ಗಳು ಮತ್ತು ತಿನಿಸುಗಳು ಮುಚ್ಚಲ್ಪಟ್ಟಿವೆ ಮತ್ತು ಯಾರೂ ಭಯದಿಂದ ಬಾಗಿಲು ಅಥವಾ ಕಿಟಕಿಗಳನ್ನು ತೆರೆಯುತ್ತಿಲ್ಲ. ಆತಂಕದ ಪರಿಸ್ಥಿತಿ ಗ್ರಾಮಸ್ಥರ ಜೀವನೋಪಾಯದ ಮೇಲೂ ಪರಿಣಾಮ ಬೀರುತ್ತಿದೆ. ಜನರು ಕೃಷಿ ಕೆಲಸ ಮತ್ತು ಕೆಲಸಗಳಿಗಾಗಿ ಹೊರಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಮತ್ತು ದಿನಗೂಲಿಗಳು ತಮ್ಮ ಮನೆಗಳಿಗೆ ತಮ್ಮನ್ನು ಸೀಮಿತಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿ