ಬೆಳ್ಳುಳ್ಳಿ ಕಬಾಬ್ ಟ್ರೆಂಡ್ ಬೆನ್ನಲ್ಲೇ 400ರ ಗಡಿದಾಟಿದ ಬೆಳ್ಳುಳ್ಳಿ ಬೆಲೆ
ಬೆಂಗಳೂರು: ರಾಜ್ಯದಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರಿದ್ದು 300ರ ಗಡಿದಾಡಿದೆ. ಬೆಳ್ಳುಳ್ಳಿ ಪೂರೈಕೆಯಲ್ಲಿ ಶೇ.50ರಷ್ಟು ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರಿದೆ.
1 ಕೆ.ಜಿ. ಬೆಳ್ಳುಳ್ಳಿ ದರ 350 ರೂ. ಗಳಿಗೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂಪಾಯಿಗಳಿಗೂ ಅಧಿಕ ಬೆಲೆ ಏರಿಕೆಯಾಗಿದೆ.
ಬೆಳ್ಳುಳ್ಳಿ ಬೆಳೆಯುವ ಉತ್ತರ ಭಾರತ ರಾಜ್ಯಗಳಲ್ಲಿ ಬರಗಾಲ ಆವರಿಸಿದ್ದು, ಇದರಿಂದಾಗಿ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಸಹಜವಾಗಿಯೇ ಬೆಲೆ ಏರಿಕೆಯಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದೆ. ಆದರೂ ಇಡೀ ಕರ್ನಾಟಕಕ್ಕೆ ಪೂರೈಸಲು ಇದು ಸಾಲದು. ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಿಂದ ಬೆಳ್ಳುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಬೆಳ್ಳುಳ್ಳಿ ಪೂರೈಕೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಸದ್ಯ ಮಧ್ಯಪ್ರದೇಶದಿಂದ ಮಾತ್ರವೇ ಬೆಳ್ಳುಳ್ಳಿ ಆಮದಾಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಗುಜರಾತ್ ಮತ್ತು ರಾಜಸ್ಥಾನದಿಂದ ಬೆಳ್ಳುಳ್ಳಿ ಪೂರೈಕೆಯಾಗಬಹುದು ಎಂದು ಹೇಳಲಾಗಿದೆ. ಹೀಗಾಗಿ ತಿಂಗಳ ಅಂತ್ಯದೊಳಗೆ ಬೆಳ್ಳುಳ್ಳಿ ಬೆಲೆ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಬೆಳ್ಳುಳ್ಳಿ ಕಬಾಬ್ ಎಂಬ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಈ ಸಮಯದಲ್ಲೇ ಬೆಳ್ಳುಳ್ಳಿ ಬೆಲೆ ಕೂಡ ಏರಿಕೆಯಾಗಿದೆ. ಆದರೂ, ಸಾಕಷ್ಟು ಜನರು ಬೆಳ್ಳುಳ್ಳು ಕಬಾಬ್ ತಾವೇ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ.