ಕದನ ವಿರಾಮ ವಿಸ್ತರಿಸುತ್ತೇವೆ: ತನಗೆ ತಾನೇ ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್: ಪ್ರತಿಕ್ರಿಯೆ ನೀಡದ ಇರಾನ್
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ಇರಾನ್ ಜೊತೆಗಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಾಗಿ ಅವರು ತಿಳಿಸಿದ್ದಾರೆ. ಶಾಂತಿ ಮಾತುಕತೆಗಳಿಗೆ ಮತ್ತು ಇರಾನ್ ತನ್ನ ಪ್ರಸ್ತಾವನೆಗಳನ್ನು ಸಿದ್ಧಪಡಿಸಿಕೊಳ್ಳಲು ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ನಿಗದಿಯಾಗಿದ್ದ ಎರಡು ವಾರಗಳ ಕದನ ವಿರಾಮದ ಅವಧಿ ಮುಗಿಯುವ ಹಂತದಲ್ಲಿದ್ದಾಗ, ಟ್ರಂಪ್ ಅದನ್ನು ಮುಂದೂಡಿದ್ದಾರೆ. ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ವಿನಂತಿಯನ್ನು ಪುರಸ್ಕರಿಸಿ, ಇರಾನ್ ನಾಯಕತ್ವಕ್ಕೆ ಸೂಕ್ತ ಪ್ರಸ್ತಾವನೆ ನೀಡಲು ಕಾಲಾವಕಾಶ ನೀಡಲಾಗಿದೆ.
ಕದನ ವಿರಾಮ ಘೋಷಿಸಿದ್ದರೂ, ಇರಾನ್ ನ ಬಂದರುಗಳ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳು ಮತ್ತು ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮುಂದುವರಿಯಲಿದೆ. ಇದು ಇರಾನ್ ಗೆ ದೊಡ್ಡ ಹಿನ್ನಡೆಯಾಗಿದ್ದು, ಈ ವಿಷಯ ಉಭಯ ದೇಶಗಳ ನಡುವೆ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ.
ಪಾಕಿಸ್ತಾನ ಈ ಸಂಘರ್ಷದಲ್ಲಿ ಸಂಧಾನಕಾರನಾಗಿ ಕೆಲಸ ಮಾಡುತ್ತಿದೆ. ಮಂಗಳವಾರ ರಾತ್ರಿ ಕದನ ವಿರಾಮ ಮುಗಿಯಬೇಕಿತ್ತು, ಆದರೆ ಟ್ರಂಪ್ ಅವರ ಕೊನೆಯ ಕ್ಷಣದ ಹಸ್ತಕ್ಷೇಪದಿಂದಾಗಿ ಬಾಂಬ್ ದಾಳಿಯ ಆತಂಕ ಸದ್ಯಕ್ಕೆ ತಪ್ಪಿದೆ.
ಈ ನಡುವೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪಾಕಿಸ್ತಾನಕ್ಕೆ ಕೈಗೊಳ್ಳಬೇಕಿದ್ದ ಪ್ರವಾಸವನ್ನು ಸದ್ಯಕ್ಕೆ ರದ್ದುಗೊಳಿಸಲಾಗಿದೆ. ಇರಾನ್ ತನ್ನ ಅಧಿಕೃತ ಪ್ರಸ್ತಾವನೆಯನ್ನು ಸಲ್ಲಿಸಿದ ನಂತರವಷ್ಟೇ ಮುಂದಿನ ಮಾತುಕತೆಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ವೈಟ್ ಹೌಸ್ ತಿಳಿಸಿದೆ.
ಟ್ರಂಪ್ ತನ್ನಷ್ಟಕ್ಕೆ ತಾನೇ ಈ ಘೋಷಣೆ ಮಾಡಿಕೊಂಡಿದ್ದಾರೆ. ಆದ್ರೆ ಇರಾನ್ ಟ್ರಂಪ್ ಅವರ ಹೇಳಿಕೆಗೆ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಪ್ರಸ್ತಾವನೆ ಸಲ್ಲಿಕೆಯ ನಂತರವಷ್ಟೇ ಈ ಪ್ರಾಂತ್ಯದಲ್ಲಿ ಶಾಂತಿ ನೆಲೆಸುತ್ತದೆಯೇ ಅಥವಾ ಮತ್ತೆ ಸಂಘರ್ಷ ಆರಂಭವಾಗುತ್ತದೆಯೇ ಎಂಬುದು ತಿಳಿಯಲಿದೆ.
ಈ ಬೆಳವಣಿಗೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಆತಂಕ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧವು ವಾಣಿಜ್ಯ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























