ರೇಣುಕಾಸ್ವಾಮಿ ಮಾಡಿದ್ದೂ ತಪ್ಪು, ದರ್ಶನ್ ಮಾಡಿರೋದೂ ತಪ್ಪು: ಕಠಿಣ ಕಾನೂನು ಜಾರಿಯಾಗಬೇಕಿದೆ - Mahanayaka

ರೇಣುಕಾಸ್ವಾಮಿ ಮಾಡಿದ್ದೂ ತಪ್ಪು, ದರ್ಶನ್ ಮಾಡಿರೋದೂ ತಪ್ಪು: ಕಠಿಣ ಕಾನೂನು ಜಾರಿಯಾಗಬೇಕಿದೆ

darshan
13/06/2024

ನಟ ದರ್ಶನ್ ಹಾಗೂ ಟೀಮ್ ವಿರುದ್ಧ ರೇಣುಕಾಸ್ವಾಮಿ ಹತ್ಯೆ ಆರೋಪ ಕೇಳಿ ಬಂದಿದೆ. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡಿರುವ ವಿಚಾರವಾಗಿ ಹತ್ಯೆ ನಡೆದಿದೆ ಎನ್ನುವ ಶಂಕೆಯ ಹಾದಿಯಲ್ಲಿ ಪೊಲೀಸ್ ತನಿಖೆ ಕೂಡ ಮುಂದುವರಿದಿದೆ. ಚಿತ್ರರಂಗದ ಸಾಕಷ್ಟು ಗಣ್ಯರು ಈ ಕೃತ್ಯವನ್ನು ಖಂಡಿಸಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿರುವವರಿಗೆ ದರ್ಶನ್ ಪ್ರಕರಣ ಒಂದು ಪಾಠ. ಮಾತ್ರವಲ್ಲದೇ ಯಾರಿಂದಲೋ ತೊಂದರೆಯಾಯಿತು ಅಂತ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ, ಕೊಲೆ ಮಾಡಿದರೆ ಕಾನೂನು ಸುಮ್ಮನಿರುವುದಿಲ್ಲ ಎನ್ನುವುದಕ್ಕೂ ಈ ಘಟನೆ ಒಂದು ನಿದರ್ಶನವಾಗಿದೆ.


Provided by

ದರ್ಶನ್ ಪ್ರಕರಣವನ್ನು ಗಮನಿಸಿದರೆ, ಇಲ್ಲಿ ಸೃಷ್ಟಿಯಾದ ಸಂದರ್ಭವನ್ನು ಕೋಪ, ದ್ವೇಷದ ಕೈಗೆ ನೀಡಿ, ಕಾನೂನಿನ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಂತೆ ಕಾಣುತ್ತಿದೆ. ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಮರ್ಮಾಂಗದ ಚಿತ್ರವನ್ನು ಕಳುಹಿಸಿರುವುದು ಈ ಘಟನೆಗೆ ಮುಖ್ಯ ಕಾರಣವಾಗಿದೆ. ರೇಣುಕಾಸ್ವಾಮಿಯ ಕೊಲೆಯನ್ನು ಖಂಡಿಸುವುದರ ಜೊತೆಗೆ ಆತ ಅಶ್ಲೀಲ ಸಂದೇಶದ ಮೂಲಕ ಪವಿತ್ರಾ ಗೌಡ ಅವರಿಗೆ ಕಿರುಕುಳ ನೀಡಿರುವುದನ್ನು ಕೂಡ ಸಮಾಜ ಖಂಡಿಸಲೇ ಬೇಕಿದೆ.

ಸಾಮಾಜಿಕ ಜಾಲತಾಣ ಬಂದ ಬಳಿಕ ಮನುಷ್ಯರ ವಿಕೃತಿಗಳು ಒಂದೊಂದು ಬಯಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೋ ನಿಂದಿಸುವುದು, ಮಾನಹಾನಿಕರವಾಗಿ ಕಾಮೆಂಟ್ ಗಳನ್ನು ಹಾಕುವುದು, ತಮಗೆ ಸಂಬಂಧವಿಲ್ಲದ ವಿಚಾರಗಳಿಗೆ ಕೈ ಹಾಕುವವರ ಜೊತೆಗೆ, ಹೆಣ್ಣು ಮಕ್ಕಳ ಪ್ರೊಫೈಲ್ ಗಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಕಾಮುಕರು ಕೂಡ ನಮ್ಮ ನಡುವೆಯೇ ಇದ್ದಾರೆ.  ದೊಡ್ಡ ಸೆಲೆಬ್ರೆಟಿಗಳೇ ಇಂತಹ ಕಾಮಣ್ಣರಿಂದ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದರೆ, ಇನ್ನು ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಏನಾಗಬೇಡ?

ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ಸಹಿಸಲಾರದೇ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ಸುದ್ದಿಗಳನ್ನು ದಿನ ನಿತ್ಯ ಕೇಳುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಸಹಿಸಲಾರದೇ ಸಾಕಷ್ಟು ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಯನ್ನೇ ನಿಲ್ಲಿಸಿರುವ ಉದಾಹರಣೆಗಳಿವೆ.  ಅದರಲ್ಲಂತೂ ಇನ್ ಸ್ಟಾಗ್ರಾಮ್ ಗಳಲ್ಲಿ ಸಂಪರ್ಕಿಸಿ ಸಾಕಷ್ಟು ಹೆಣ್ಣುಮಕ್ಕಳ ಜೀವನವನ್ನು ನರಕವಾಗಿಸುತ್ತಿರುವ ಪ್ರಕರಣಗಳು ಒಂದರ ಹಿಂದೊಂದರಂತೆ ನಡೆಯುತ್ತಲೇ ಇವೆ. ಇಂತಹ ಕಾಮುಕರಿಗೆ ತಕ್ಕ ಪಾಠ ಕಲಿಸಬೇಕಾದರೆ, ಕಠಿಣ ಕಾನೂನು ಜಾರಿಗೊಳಿಸುವ ಅವಶ್ಯಕತೆ ಇದೆ.

ಸದ್ಯ ಚರ್ಚೆಯಾಗುತ್ತಿರುವ ವಿಚಾರಗಳನ್ನು ಗಮನಿಸಿದರೆ, ರೇಣುಕಾಸ್ವಾಮಿಗೆ ಪತ್ನಿ ಇದ್ದಾರೆ. ಪತ್ನಿ 5 ತಿಂಗಳ ಗರ್ಭಿಣಿ ಕೂಡ.  ಪವಿತ್ರಾ ಗೌಡ ಅಂತಹವರ ಪ್ರೊಫೈಲ್ ಗೆ ಹೋಗಿ ಅಶ್ಲೀಲ ಮೆಸೆಜ್ ಗಳನ್ನು, ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡುವ ವಿಕೃತಿ ಯಾಕೆ ಬಂತು? ಇದೀಗ ಮಹಿಳೆಯರಿಗೆ ಕಿರುಕುಳ ನೀಡಿದ ವಿಚಾರದಲ್ಲೇ ರೇಣುಕಾಸ್ವಾಮಿ ಪ್ರಾಣ ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಯಾರನ್ನೇ ಆಗಲಿ ಕೊಲೆ ಮಾಡುವುದನ್ನು ಯಾರೂ ಬೆಂಬಲಿಸಲು ಸಾಧ್ಯವೇ ಇಲ್ಲ. ಮಹಿಳೆಯರು ಇಂತಹ ಕಿರುಕುಳಗಳು ನಡೆದಾಗ ಅದರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಕಾಮುಕರ ಮಟ್ಟಹಾಕಲು ಮುಂದಾಗಬೇಕಿದೆ.  ರೇಣುಕಾಸ್ವಾಮಿಯ ಪ್ರಕರಣ ಇಲ್ಲಿ ಒಂದು ಉದಾಹರಣೆ ಅಷ್ಟೆ. ಪದೇ ಪದೇ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಮಹಿಳೆಯರನ್ನು ಮಾನಸಿಕವಾಗಿ ಕುಗ್ಗಿಸುವಂತಹ ಸಾಕಷ್ಟು ಕಾಮುಕರು ನಮ್ಮ ಸಮಾಜದಲ್ಲಿರುತ್ತಾರೆ. ಅಂತಹ ವಿಕೃತಿಗಳ ವಿರುದ್ಧವೂ ಜನರು ಧ್ವನಿಯೆತ್ತಬೇಕಿದೆ.

ಈ ಹತ್ಯೆಯಲ್ಲಿ ನಟ ದರ್ಶನ್  ಕೈವಾಡ ಇದ್ದರೆ, ಖಂಡಿತವಾಗಿಯೂ ಅವರಿಗೆ ಶಿಕ್ಷೆಯಾಗಬೇಕು. ಜೊತೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಮಹಿಳೆಯರನ್ನು ಕಾಡುವ ವಿಕೃತರಿಗೂ  ಕಾನೂನಿನ ಪಾಠವಾಗಬೇಕು ಎನ್ನುವುದೇ ಸದ್ಯದ ನಿಲುವು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ