SIR: ಮತದಾರರ ಪಟ್ಟಿ ಪರಿಷ್ಕರಣೆ: ಅಧಿಕಾರಿಗಳು ಮನೆಗೆ ಬಂದಾಗ ಏನು ಮಾಡಬೇಕು?: ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ - Mahanayaka

SIR: ಮತದಾರರ ಪಟ್ಟಿ ಪರಿಷ್ಕರಣೆ: ಅಧಿಕಾರಿಗಳು ಮನೆಗೆ ಬಂದಾಗ ಏನು ಮಾಡಬೇಕು?: ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

sir.jpg
30/06/2026

ಚುನಾವಣಾ ಆಯೋಗದ ಮತದಾರರ ಪರಿಶೀಲನಾ ಅಭಿಯಾನವಾದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಜೂನ್ 30ರಿಂದ ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಮೇಘಾಲಯ ಮತ್ತು ಜಾರ್ಖಂಡ್ ಸೇರಿದಂತೆ 4 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಜೂನ್ 30 ರಿಂದ ಜುಲೈ 29 ರವರೆಗೆ ಒಂದು ತಿಂಗಳ ಕಾಲ ನಡೆಯಲಿರುವ ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಮೂಡುವ ಪ್ರಮುಖ ಪ್ರಶ್ನೆಗಳು ಮತ್ತು ಅದಕ್ಕೆ ಲಭ್ಯವಿರುವ ಉತ್ತರಗಳು ಇಲ್ಲಿವೆ:

1. ನಾನು ಈಗಾಗಲೇ ಮತದಾರನಾಗಿದ್ದರೆ, ಈಗ ಏನಾದರೂ ಮಾಡಬೇಕೇ?
ಹೌದು. ಬಿಎಲ್ ಒ (BLO) ನಿಮ್ಮ ಮನೆಗೆ ಭೇಟಿ ನೀಡಿದಾಗ, ನೀವು ಎನ್ಯೂಮರೇಷನ್ ಫಾರ್ಮ್ (ಗಣತಿ ನಮೂನೆ) ಅನ್ನು ಭರ್ತಿ ಮಾಡಿ, ಅದರ ಒಂದು ಪ್ರತಿಯನ್ನು ಅವರಿಗೆ ನೀಡಿ ಸ್ವೀಕೃತಿ ರಸೀದಿಯನ್ನು (Acknowledgement) ಪಡೆದುಕೊಳ್ಳಬೇಕು.

2. ಬಿಎಲ್ಒ ನನ್ನ ಮನೆಗೆ ಯಾವಾಗ ಭೇಟಿ ನೀಡುತ್ತಾರೆ?
ಜೂನ್ 30 ರಿಂದ ಜುಲೈ 29 ರ ನಡುವೆ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಲಿದ್ದಾರೆ.

3. ಬಿಎಲ್ ಒ ಬಂದಾಗ ನನ್ನ ಮನೆಗೆ ಬೀಗ ಹಾಕಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಮನೆಗೆ ಬೀಗ ಹಾಕಿದ್ದರೆ, ಬಿಎಲ್ ಒ ಅವರು ಅಲ್ಲಿಯೇ ಫಾರ್ಮ್ ಅನ್ನು ಬಿಟ್ಟು ಹೋಗುತ್ತಾರೆ. ಫಾರ್ಮ್ ಪಡೆದುಕೊಳ್ಳಲು ಅವರು ಕನಿಷ್ಠ ಮೂರು ಬಾರಿ ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ.


Provided by
Provided by

4. ಇದಕ್ಕಾಗಿ ನಾನು ಆಧಾರ್, ಪಾಸ್ಪೋರ್ಟ್ ಅಥವಾ ಇತರ ದಾಖಲೆಗಳನ್ನು ಸಲ್ಲಿಸಬೇಕೇ?
ಇಲ್ಲ. ಗಣತಿ ನಮೂನೆಯೊಂದಿಗೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

5. ಬಿಎಲ್ ಒಗಾಗಿ ಕಾಯುವ ಬದಲು ಆನ್ಲೈನ್ನಲ್ಲಿ ಫಾರ್ಮ್ ಸಲ್ಲಿಸಬಹುದೇ?
ಹೌದು. ಚುನಾವಣಾ ಆಯೋಗದ ಅಧಿಕೃತ ಮತದಾರರ ಪೋರ್ಟಲ್ (Voter Portal) ಮೂಲಕವೂ ನೀವು ಈ ಫಾರ್ಮ್ ಅನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಬಹುದು.

6. ಈ ಹಿಂದೆ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿದ್ದರೆ ಏನು ಮಾಡಬೇಕು?ಹಿಂದಿನ ಪಟ್ಟಿಯಲ್ಲಿ ನಿಮ್ಮ ಹೆಸರಿರದೇ, ನಿಮ್ಮ ಪೋಷಕರು ಅಥವಾ ಅಜ್ಜ–ಅಜ್ಜಿಯರ ಹೆಸರು ಇದ್ದಲ್ಲಿ, ನೀವು ಫಾರ್ಮ್ನಲ್ಲಿ ಅವರ ವಿವರಗಳನ್ನು ಒದಗಿಸಬೇಕಾಗುತ್ತದೆ.

7. ನನ್ನ ವಿವರಗಳು ಸರಿಯಾಗಿವೆಯೇ ಎಂದು ತಿಳಿಯುವುದು ಹೇಗೆ?
ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ (Draft Electoral Roll) ಪ್ರಕಟವಾಗಲಿದೆ. ಅದರಲ್ಲಿ ಏನಾದರೂ ತಪ್ಪುಗಳಿದ್ದರೆ ಅಥವಾ ಹೆಸರು ಬಿಟ್ಟು ಹೋಗಿದ್ದರೆ, ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರ ನಡುವೆ ನೀವು ಆಕ್ಷೇಪಣೆ ಸಲ್ಲಿಸಬಹುದು.

8. ಸಹಾಯ ಅಥವಾ ಹೆಚ್ಚಿನ ಮಾಹಿತಿಗಾಗಿ ಎಲ್ಲಿ ಸಂಪರ್ಕಿಸಬೇಕು?
ಯಾವುದೇ ಪ್ರಶ್ನೆಗಳಿದ್ದಲ್ಲಿ ಮತದಾರರ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಬಹುದು ಅಥವಾ ಹತ್ತಿರದ ಮತದಾರರ ಕೇಂದ್ರ ಅಥವಾ ಜಿಲ್ಲಾ ಚುನಾವಣಾ ಕಚೇರಿಯನ್ನು ಸಂಪರ್ಕಿಸಬಹುದು.

ಗಮನಿಸಿ: ಪರಿಷ್ಕೃತ ಕರಡು ಮತದಾರರ ಪಟ್ಟಿಯು ಆಗಸ್ಟ್ 5 ರಂದು ಬಿಡುಗಡೆಯಾಗಲಿದ್ದು, ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೆಪ್ಟೆಂಬರ್ 4 ರವರೆಗೆ ಕಾಲಾವಕಾಶವಿರುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7 ರಂದು ಪ್ರಕಟಿಸಲಾಗುವುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ