ಸೌಜನ್ಯ ಮಾತ್ರವೇ? ವಿಟ್ಲದ ದಲಿತ ಬಾಲಕಿ ಹೆಣ್ಣಲ್ಲವೇ?

ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆರೋಪಿಯನ್ನು ಬಂಧಿಸಲಾಗಿಲ್ಲ. ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ ಈ ಪ್ರಕರಣದ ಬಗ್ಗೆ ನಾನಾ ಅನುಮಾನಗಳನ್ನು ವ್ಯಕ್ತಪಡಿಸಿದೆ. ಆರೋಪಿ ಪ್ರಭಾವಿಯಾಗಿರುವುದರಿಂದ ಹಾಗೂ ಮೇಲ್ಜಾತಿಯ ವ್ಯಕ್ತಿಯಾಗಿರುವ ಕಾರಣ ಆತನಿಗೆ ಜಾಮೀನು ಸಿಗುವವರೆಗೂ ಬಂಧಿಸದೇ ಕಾಲಹರಣ ಮಾಡಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ದಲಿತ ರಾಮಯ್ಯ ಎನ್ನುವ ಸಿಎಂ ಸಿದ್ದರಾಮಯ್ಯನವರು ಅಧಿಕಾರದಲ್ಲಿರುವ ಸಂದರ್ಭದಲ್ಲೇ, ಗೃಹ ಸಚಿವರೂ ದಲಿತರೇ ಇರುವ ಸಂದರ್ಭದಲ್ಲೂ ಒಬ್ಬ ದಲಿತ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ ಎಂದರೆ, ಇದು ನಾಚಿಕೆಗೇಡಿನ ಸಂಗತಿ ಎನ್ನುವ ಮಾತುಗಳು ಮಂಗಳೂರಿನಾದ್ಯಂತ ಕೇಳಿ ಬಂದಿದೆ.
ದಲಿತರ ಮೇಲೆ ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವ ಘಟನೆಗಳು ಹೆಚ್ಚಾಗಿ ನಡೆಯುತ್ತದೆ. ಈ ಪ್ರಕರಣವನ್ನೂ ಮುಚ್ಚಿಹಾಕಲು ಮುಂದಾಗಿದ್ದಾರೆಯೇ ಎನ್ನುವ ಅನುಮಾನ ಕೂಡ ಸಹಜವಾಗಿಯೇ ಕೇಳಿ ಬಂದಿದೆ. ಇತ್ತೀಚೆಗಷ್ಟೇ ರಾಜ್ಯಾದ್ಯಂತ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಹೋರಾಟಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿಯೇ ವಿಟ್ಲ ಪರಿಸರದಲ್ಲಿ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಎಂತೆಂಥಾ ದರೋಡೆಕೋರರನ್ನು ಬೇರೆ ರಾಜ್ಯದಲ್ಲಿ ಅಡಗಿದ್ದರೂ ಹಿಡಿದು ತರುವ ಶಕ್ತಿ ಇರುವ ಪೊಲೀಸರಿಗೆ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗುವುದಿಲ್ಲ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
ಕೇವಲ ದಲಿತ ಸಿಎಂ ಗಾದಿಗೆ ಹೊಡೆದಾಡುವ ದಲಿತ ರಾಜಕಾರಣಿಗಳಿಗೆ ತಮ್ಮ ಸಮುದಾಯದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವಷ್ಟೂ ಶಕ್ತಿ ಇಲ್ಲವಾದರೆ, ನೀವು ಯಾವ ಸಚಿವ ಸ್ಥಾನದಲ್ಲಿದ್ದು ಏನು ಪ್ರಯೋಜನ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ಏನು ಮಾಡುತ್ತಿದ್ದಾರೆ? ಒಂದು ಹೆಣ್ಣು ಮಗಳಿಗೆ ನ್ಯಾಯಕೊಡಿಸುವ ಪ್ರಯತ್ನಕ್ಕೆ ಯಾಕೆ ನೀವು ಮುಂದಾಗಬಾರದು? ಎನ್ನುವ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
ತಕ್ಷಣದಲ್ಲಿ ಪೊಲೀಸರು ಈ ಪ್ರಕರಣದ ಆರೋಪಿಯನ್ನು ಬಂಧಿಸದೇ ನಿರ್ಲಕ್ಷ್ಯ ವಹಿಸಿದರೆ, ಸೌಜನ್ಯ ಪ್ರಕರಣದಲ್ಲಿ ಹೇಗೆ ಜನರು ಬೀದಿಗಿಳಿದರೋ ಅದೇ ರೀತಿಯಲ್ಲಿ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿದೆ. ನಾಳೆಯಿಂದಲೇ ವಿಟ್ಲ ಸೇರಿದಂತೆ ವಿವಿಧೆಡೆಗಳಲ್ಲಿ ಪೊಲೀಸರ ಪಕ್ಷಪಾತಿ ಧೋರಣೆ ವಿರುದ್ಧ ಪ್ರತಿಭಟನೆಗಳು ನಡೆಯಲಿದೆ ಎನ್ನಲಾಗಿದೆ. ಗೃಹ ಸಚಿವರು, ಪೊಲೀಸ್ ಅಧಿಕಾರಿಗಳು ತಕ್ಷಣವೇ ಆರೋಪಿಯನ್ನು ಬಂಧಿಸಿ, ಕಾನೂನು ರೀತಿಯ ಕ್ರಮ ಜರುಗಿಸಬೇಕು ಎನ್ನುವ ಒತ್ತಾಯ ಇದೀಗ ವ್ಯಾಪಕವಾಗಿ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: