ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆ | ಬಿಜೆಪಿ ಹೈಕಮಾಂಡ್ ನ ಬಣ್ಣ ಬಯಲು ಮಾಡಿತೇ ಆ ಒಂದು ಹೇಳಿಕೆ? - Mahanayaka

ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆ | ಬಿಜೆಪಿ ಹೈಕಮಾಂಡ್ ನ ಬಣ್ಣ ಬಯಲು ಮಾಡಿತೇ ಆ ಒಂದು ಹೇಳಿಕೆ?

21/10/2020

ಬೆಂಗಳೂರು: ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಅವರ ವಿರುದ್ಧ ನೀಡಿರುವ ಹೇಳಿಕೆ ಇದೀಗ ಪಕ್ಷಗೊಳಗೆ ಗೊಂದಲವನ್ನು ಸೃಷ್ಟಿ ಮಾಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಗೊಂದಲಗಳ ಮಧ್ಯ ಪ್ರವೇಶಿಸಿ ಗೊಂದಲವನ್ನು ನಿವಾರಿಸಲು ಯತ್ನಿಸಿದ್ದಾರೆ.

ಈ ಹಿಂದೆ, ಯಡಿಯೂರಪ್ಪ ನಮ್ಮ ನಾಯಕರಲ್ಲ, ನಮ್ಮ ನಾಯಕರು ಮೋದಿ ಮತ್ತು ಅಮಿತ್ ಶಾ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದೀಗ ಯಡಿಯೂರಪ್ಪ ಅವರು ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದಿಲ್ಲ, ಹೈಕಮಾಂಡ್ ಗೆ ಯಡಿಯೂರಪ್ಪ ಅಂದ್ರೆ ಆಗಲ್ಲ ಎಂದು ಹೇಳಿದ್ದರು. ಇದು ಇದೀಗ ಕಾರ್ಯಕರ್ತರಲ್ಲಿ ಹಾಗೂ ನಾಯಕರಲ್ಲಿ ಗೊಂದಲ ಮೂಡಿಸಿರುವುದು ಮಾತ್ರವಲ್ಲದೇ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.

ಈ ಎಲ್ಲ ಗೊಂದಲಗಳ ನಡುವೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ, ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ. ಅಶಿಸ್ತು ಪ್ರದರ್ಶಿಸುವವರ ವಿರುದ್ಧ ಶಿಸ್ತು ಕ್ರಮ ಜರಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಡೆಲ್ಲಿ ಹೈಕಮಾಂಡ್ ಯಡಿಯೂರಪ್ಪ ಅವರ ಜೊತೆಗೆ ಅಸಹಾಕಾರ ತೋರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ಬರ ಪರಿಹಾರ, ಜಿಎಸ್ ಟಿ ಪಾಲು ಮೊದಲಾದವುಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ನಡುವೆ ಯತ್ನಾಳ್ ಅವರು ನೀಡಿರುವ ಹೇಳಿಕೆ ಹೆಚ್ಚು ವಾಸ್ತವತೆಯಿಂದ ಕೂಡಿದೆ ಎನ್ನುವ ಚರ್ಚೆಗಳು ಕೇಳಿ ಬಂದಿತ್ತು. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕೇವಲ ಪಕ್ಷಕ್ಕೆ ಮಾತ್ರವಲ್ಲ ಬಿಜೆಪಿ ಹೈಕಮಾಂಡ್ ಗೆ ಮುಜುಗರ ತರುವಂತಹದ್ದಾಗಿದೆ. ರಾಜ್ಯವನ್ನು ಕೇಂದ್ರವು ಯಡಿಯೂರಪ್ಪ ಅವರ ಮೇಲೆ ದ್ವೇಷ ಸಾಧಿಸುವುದಕ್ಕಾಗಿ ಪರಿಹಾರ ಮೊತ್ತಗಳನ್ನು ನೀಡದೇ ಸತಾಯಿಸುತ್ತಿದೆ. ಯಡಿಯೂರಪ್ಪ ಅವರು ಇಷ್ಟ ಇಲ್ಲದೇ ಇರುವ ಕಾರಣಕ್ಕಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಬೇಕಾದ ಮೊತ್ತ ನೀಡುತ್ತಿಲ್ಲ ಎನ್ನುವ ಚರ್ಚೆಗಳಿಗೆ ಗ್ರಾಸವಾಗಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ