ಕ್ರಿಕೆಟಿಗ ರಿಷಬ್ ಪಂತ್ ರನ್ನು ಕಾಪಾಡಿದ್ದ ಯುವಕ ಮತ್ತು ಪ್ರೇಯಸಿ ಆತ್ಮಹತ್ಯೆಗೆ ಯತ್ನ: ಪ್ರೇಯಸಿ ಸಾವು

ಲಕ್ನೋ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ರಕ್ಷಿಸಿದ್ದ ಯುವಕ ಮತ್ತು ಆತನ ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ ಸಾವನ್ನಪ್ಪಿ, ಯುವಕನ ಸ್ಥಿತಿ ಗಂಭೀರವಾಗಿದೆ.
ಫೆ.9ರಂದು ಈ ಘಟನೆ ನಡೆದಿದೆ. ರಜತ್ ಕುಮಾರ್(25) ಮತ್ತು ಆತನ ಗೆಳತಿ ಮನು ಕಶ್ಯಪ್(21) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕುಟುಂಬಸ್ಥರು ಇವರಿಬ್ಬರ ಜಾತಿ ಬೇರೆ ಬೇರೆ ಎಂದು ತಗಾದೆ ತೆಗೆದಿದ್ದರು. ಇಬ್ಬರಿಗೂ ಬೇರೆ ಬೇರೆ ಕಡೆಯಲ್ಲಿ ಸಂಬಂಧ ನೋಡಿ ವಿವಾಹ ಮಾಡಿಸಲು ಮುಂದಾಗಿದ್ದರಿಂದ ನೊಂದು ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮನು ಕಶ್ಯಪ್ ಸಾವನ್ನಪ್ಪಿದ್ದರೆ, ರಜತ್ ಕುಮಾರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
2022ರ ಡಿಸೆಂಬರ್ ನಲ್ಲಿ ರಿಷಭ್ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿತ್ತು. ಈ ವೇಳೆ ಅವರನ್ನು ರಕ್ಷಿಸುವಲ್ಲಿ ರಜತ್ ಕುಮಾರ್ ಪ್ರಮುಖ ಪಾತ್ರವಹಿಸಿದ್ದ. ಆದರೆ, ಇಂದು ಜಾತಿ ಪೀಡಿತ ಮನಸ್ಥಿತಿಗಳ ವಿಕೃತಿಗೆ ಬಾಳಿ ಬದುಕಬೇಕಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಜತ್ ಬದುಕಿ ಬರಲಿ ಎಂದು ಬಂಧು ಮಿತ್ರರು ಪ್ರಾರ್ಥಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: