ನೈಟ್ ಶಿಫ್ಟ್ ಮುಗಿಸಿ ಬರುತ್ತಿದ್ದ ಯುವತಿ ಮೇಲೆ ಕ್ಯಾಬ್ ಚಾಲಕ ಸೇರಿದಂತೆ ಐವರಿಂದ ಸಾಮೂಹಿಕ ಅತ್ಯಾಚಾರ - Mahanayaka

ನೈಟ್ ಶಿಫ್ಟ್ ಮುಗಿಸಿ ಬರುತ್ತಿದ್ದ ಯುವತಿ ಮೇಲೆ ಕ್ಯಾಬ್ ಚಾಲಕ ಸೇರಿದಂತೆ ಐವರಿಂದ ಸಾಮೂಹಿಕ ಅತ್ಯಾಚಾರ

haryana
08/04/2021

ಗುರುಗ್ರಾಮ್: ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಅಪಹರಿಸಿ ಕ್ಯಾಬ್ ಚಾಲಕ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಹರ್ಯಾಣದಿಂದ ವರದಿಯಾಗಿದೆ.

24 ವರ್ಷ ವಯಸ್ಸಿನ ದೆಹಲಿ ಮೂಲದ ಯುವತಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯಾಗಿದ್ದು, ಬೆಳಗಿನ ಜಾವ 3 ಗಂಟೆಗೆ ಇಫ್ಕೋ ಚೌಕ್ ನಿಂದ ಯುವತಿ ಕ್ಯಾಬ್ ಹತ್ತಿದ್ದು ಮೂವರು ಆಕೆಯನ್ನು ಅಪಹರಿಸಿ ಝಜ್ಜರ್ ಜಿಲ್ಲೆಯ ನಿರ್ಜನ ಪ್ರದೇಶದ ಹೊಲಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಕ್ಯಾಬ್ ಝಜ್ಜರ್ ತಲುಪಿದಾಗ ಮೂವರು ಆರೋಪಿಗಳು ಮತ್ತಿಬ್ಬರನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಮೊದಲು ಮದ್ಯ ಸೇವಿಸಿದ ಆರೋಪಿಗಳು ಆಕೆಯನ್ನು ಕ್ಯಾಬ್ ನಲ್ಲಿ ಲಾಕ್ ಮಾಡಿದ್ದಾರೆ. ಬೆಳಗಿನವರೆಗೂ ಮೇಲೆ ಅತ್ಯಾಚಾರ ಎಸಗಿ ಫಾರೂಕ್ ನಗರ ಸಮೀಪ ಆಕೆಯನ್ನು ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಂತ್ರಸ್ತೆ ದ್ವಾರಕಾ ರಸ್ತೆ ನಿವಾಸಿಯಾಗಿದ್ದು ಗುರುಗ್ರಾಮದ ಎಂಜಿ ರಸ್ತೆಯ ಮಾಲ್ ನಲ್ಲಿ ಕೆಲಸಮಾಡುತ್ತಿದ್ದಾಳೆ. ಭಾನುವಾರ ರಾತ್ರಿ ಇಫ್ಕೋ ಚೌಕ್ ಗೆ ಹೋಗಿ ಕ್ಯಾಬ್ ಗೆ ಕಾಯುತ್ತಿರುವಾ ಕ್ಯಾಬ್ ಚಾಲಕ ಆಕೆಯನ್ನು ದ್ವಾರಕ ಮೋಡ್ ನಲ್ಲಿ ಇಳಿಸಲು ಒಪ್ಪಿಕೊಂಡಿದ್ದರಿಂದ ಕ್ಯಾಬ್ ಹತ್ತಿದ್ದಾಳೆ. ಕ್ಯಾಬ್ ಹತ್ತಿದ ಬಳಿಕ ಯುವತಿ ನಿದ್ದೆಗೆ ಜಾರಿದ್ದು, ಕೆಲ ಕ್ಷಣಗಳ ಬಳಿಕ ಎಚ್ಚರವಾದಾಗ ಬೇರೆ ಮಾರ್ಗದಲ್ಲಿ ಕೊಂಡೊಯ್ಯುತ್ತಿರುವುದು ತಿಳಿದು ಬಂದಿದೆ. ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.




ಇನ್ನು ಸಂತ್ರಸ್ತ ಯುವತಿಯು ಆರೋಪಿಗಳಲ್ಲಿ ಕೆಲವರ ಹೆಸರುಗಳನ್ನು ಹೇಳಿದ್ದಾಳೆ. ಈ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಮನೇಸರ್ ಡಿಸಿಪಿ ವರುಣ್ ಸಿಂಗ್ಲಾ ಹೇಳಿದ್ದಾರೆ.

ಇತ್ತೀಚಿನ ಸುದ್ದಿ