ಬಜ್ಪೆ: ಸಡಗರದಿಂದ ಜರುಗಿದ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ 6ನೇ ವರ್ಷಾಚರಣೆ ಸಂಭ್ರಮ - Mahanayaka

ಬಜ್ಪೆ: ಸಡಗರದಿಂದ ಜರುಗಿದ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ 6ನೇ ವರ್ಷಾಚರಣೆ ಸಂಭ್ರಮ

parivarthana
08/06/2026

ಬಜ್ಪೆ: ಪರಿವರ್ತನಾ ಕೋ ಆಪರೇಟಿವ್ ಸೊಸೈಟಿ (ರಿ) ಇದರ 6ನೇ ವರ್ಷಾಚರಣೆ ಸಂಭ್ರಮವು ದಿನಾಂಕ 07.05.2026ರ ಶನಿವಾರದಂದು ಕೇಂದ್ರ ಕಚೇರಿಯ ಸಮೀಪದ “ಕರೀಂ ಕಾಂಪ್ಲೆಕ್ಸ್ ಸಭಾಂಗಣ”ದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲ್ಪಟ್ಟಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಅವರು, “ರಾಷ್ಟ್ರೀಕೃತ ಬ್ಯಾಂಕುಗಳು ಇಂದು ಸಾಮಾನ್ಯ ಜನರ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿವೆ. ಇಂತಹ ಸಂದರ್ಭದಲ್ಲಿ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯು ಸ್ಥಳೀಯ ಬಜ್ಪೆ ಪರಿಸರದ ಜನರಿಗೆ ಸಂಜೀವಿನಿಯಂತೆ ಒದಗಿ ಬಂದಿದೆ. ಜನರ ಬದುಕನ್ನು ಕಟ್ಟಿಕೊಳ್ಳಲು ಮತ್ತು ಅದರಲ್ಲಿ ಸಕಾರಾತ್ಮಕ ಪರಿವರ್ತನೆ ತರಲು ಈ ಸಂಸ್ಥೆ ನೆರವಾಗುತ್ತಿದೆ,” ಎಂದು ಶ್ಲಾಘಿಸಿದರು.

ಮುಂದುವರಿದು ಮಾತನಾಡಿದ ಅವರು, “ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ ಡಿ. ಅವರು ದೊಡ್ಡ ಸಾಧನೆ ಮಾಡುವ ಗುರಿ ಹೊಂದಿದವರು. ಬಜ್ಪೆಯಲ್ಲಿ ಕೇಂದ್ರ ಕಚೇರಿ ಸ್ಥಾಪಿಸಿದ ಕೇವಲ 5 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಭಾಗವಾದ ಮಂಗಳೂರಿನಲ್ಲಿ ಹೊಸ ಶಾಖೆ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಮುಂದಿನ ದಶಮಾನೋತ್ಸವದ ವೇಳೆಗೆ ಸಂಸ್ಥೆಯು ಇನ್ನಷ್ಟು ಶಾಖೆಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವಂತಾಗಲಿ,” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಮಾತನಾಡಿ, “ಯಾವುದೇ ಒಂದು ಸಂಸ್ಥೆಯನ್ನು ಸ್ಥಾಪಿಸುವುದು ಮುಖ್ಯವಲ್ಲ, ಅದರ ಕಾರ್ಯಸಾಧನೆ ಮತ್ತು ಬೆಳವಣಿಗೆ ಮುಖ್ಯವಾಗುತ್ತದೆ. ಗ್ರಾಹಕರನ್ನು ಆತ್ಮೀಯತೆಯಿಂದ ನಡೆಸಿಕೊಳ್ಳುವ ಇಲ್ಲಿನ ಸಿಬ್ಬಂದಿಗಳ ವರ್ತನೆಯೇ ಸಂಸ್ಥೆ ಇಷ್ಟೊಂದು ಒಳ್ಳೆಯ ರೀತಿಯಲ್ಲಿ ಬೆಳೆಯಲು ಕಾರಣ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ,” ಎಂದರು.

ಅಧ್ಯಕ್ಷ ಕೃಷ್ಣಾನಂದ ಡಿ. ಅವರೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ಅವರು, “ಕೃಷ್ಣಾನಂದ ಅವರು ಸಾಮಾಜಿಕ ಚಿಂತನೆಯುಳ್ಳವರಾಗಿದ್ದು, ಈ ನೆಲ, ಜಲ ಮತ್ತು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯಕ್ತಿ. ಅವರ ಈ ವಿಶಾಲ ಚಿಂತನೆಯಿಂದಲೇ ಸಂಸ್ಥೆ ಇಂದು 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಉತ್ತಮ ಸಿಬ್ಬಂದಿ, ನಿರ್ದೇಶಕರು ಹಾಗೂ ಗ್ರಾಹಕರನ್ನು ಹೊಂದಿರುವ ಈ ಸೊಸೈಟಿಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ,” ಎಂದು ಶುಭ ಹಾರೈಸಿದರು.

ವಿದ್ಯಾರ್ಥಿ ಪುರಸ್ಕಾರ ಹಾಗೂ ಅಶಕ್ತರಿಗೆ ಧನಸಹಾಯ:

6ನೇ ವರ್ಷಾಚರಣೆಯ ಈ ಶುಭ ಸಂದರ್ಭದಲ್ಲಿ, ಸಂಸ್ಥೆಯ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ, 2025–26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಅಭಿನಂದಿಸಿ, ಪ್ರೋತ್ಸಾಹ ಧನ ವಿತರಿಸಲಾಯಿತು. ಇದೇ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಅಶಕ್ತರಿಗೆ ಆರ್ಥಿಕ ಸಹಕಾರವನ್ನು ನೀಡುವ ಮೂಲಕ ಸಂಸ್ಥೆಯು ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆಯಿತು.

ಮಾತು ಕಡಿಮೆ, ಸಾಧನೆಯೇ ನನ್ನ ಗುರಿ: ಕೃಷ್ಣಾನಂದ ಡಿ.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಾನಂದ ಡಿ. ಅವರು ವೇದಿಕೆಯಲ್ಲಿದ್ದ ಗಣ್ಯರ ಸಹಕಾರವನ್ನು ಸ್ಮರಿಸುತ್ತಾ, “ಈ ಸಂಭ್ರಮಾಚರಣೆಯ ಸಂಪೂರ್ಣ ಶ್ರೇಯಸ್ಸು (ಕ್ರೆಡಿಟ್) ನಮ್ಮ ಪ್ರೀತಿಯ ಗ್ರಾಹಕರಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ, ಸಿಬ್ಬಂದಿಗಳಿಗೆ ಹಾಗೂ ನಿರ್ದೇಶಕರಿಗೆ ಸಲ್ಲುತ್ತದೆ. ನನ್ನದೇನಿದ್ದರೂ ಛಲಬಿಡದ ಪ್ರಯತ್ನವಷ್ಟೇ. ನಾನು ಹೆಚ್ಚಾಗಿ ಮಾತನಾಡುವುದಿಲ್ಲ; ಈ ಸಂಸ್ಥೆಯನ್ನು ಇನ್ನಷ್ಟು ಬೆಳೆಸಿ, ನನ್ನ ಸಾಧನೆಯ ಮೂಲಕವೇ ನನ್ನ ಕೆಲಸವನ್ನು ತೋರಿಸಿಕೊಡುತ್ತೇನೆ,” ಎಂದು ಆಶ್ವಾಸನೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರೋನಾಲ್ಡ್ ಫೆರ್ನಾಂಡಿಸ್ (ಪೆರ್ಮುದೆ, ತೆಂಕ ಎಕ್ಕಾರು), ಕಟೀಲು ನಂದಿನಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪರಿವರ್ತನಾ ಸೊಸೈಟಿಯ ಸಲಹೆಗಾರರಾದ ಶಶಿಧರ್ ಶೆಟ್ಟಿ ಕೆರಮ, ದ.ಕ. ಜಿಲ್ಲಾ ದ.ಸಂ.ಸ. ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು, ಉದ್ಯಮಿ ಕೆ. ಹುಸೈನ್ ಶರೀಫ್ ಪ್ಯಾರ, ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಷಾ, ಡಿ.ವೈ.ಎಫ್.ಐ. ಮಂಗಳೂರು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹಾಗೂ ಪರಿವರ್ತನಾ ಸೊಸೈಟಿಯ ಮಾಜಿ ಅಧ್ಯಕ್ಷರಾದ ವಿಲಿಯಮ್ ಲೋಬೊ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾವಣ್ಯ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿ ಹಾಗೂ ಗಣ್ಯರನ್ನು ಸ್ವಾಗತಿಸಿದರು. ಶಾಖಾ ಪ್ರಬಂಧಕರಾದ ಪ್ರೀತಿ ಕಾರ್ಯಕ್ರಮ ನಿರೂಪಿಸಿದರೆ, ನಿರ್ದೇಶಕಿ ಯಮುನಾ ಕಾಂಚನ್ ವಂದನಾರ್ಪಣೆ ಮಾಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ