15 ವರ್ಷದ ಬಾಲಕಿಯ ಅಪಹರಣ | ಕೆಲವೇ ದಿನಗಳ ಹಿಂದೆ ಬೆದರಿಕೆ ಹಾಕಿದ್ದವರಿಂದಲೇ ಕೃತ್ಯ?
ಮೈಸೂರು: ಮದುವೆಗೆ ಮನೆಯವರು ನಿರಾಕರಿಸಿದರು ಎಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದ್ದು, ಘಟನೆ ಸಂಬಂಧ ಅಪ್ರಾಪ್ತ ವಯಸ್ಸಿನ ಬಾಲಕಿಯ ಪೋಷಕರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
3 ತಿಂಗಳ ಹಿಂದೆಯಷ್ಟೇ ಯುವಕನೋರ್ವನ ಪೋಷಕರು ಬಾಲಕಿಯ ಮನೆಗೆ ಬಂದು ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದಾರೆ. ಆದರೆ ಬಾಲಕಿಗೆ ಇನ್ನೂ 15 ವರ್ಷ ಆಗಿದೆಯಷ್ಟೆ ಹಾಗಾಗಿ ನಾವು ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಮನೆಯವರು ಹೇಳಿದ್ದಾರೆ.
ಈ ವೇಳೆ ಯುವಕನ ಮನೆಯವರು, ಮದುವೆ ಮಾಡಿಕೊಡದಿದ್ದರೆ, ನೀವು ಪರಿಣಾಮ ಎದುರಿಸುತ್ತೀರಿ ಎಂದು ಅಪ್ರಾಪ್ತೆಯ ಪೋಷಕರಿಗೆ ಬೆದರಿಕೆ ಹಾಕಿ ಹೋಗಿದ್ದರು. ಇದಾಗಿ ಫೆ.17ರಂದು ಬಾಲಕಿ ನಾಪತ್ತೆಯಾಗಿದ್ದಾಳೆ. ಪೋಷಕರು ನಿರಂತರವಾಗಿ ಬಾಲಕಿಗಾಗಿ ಹುಡುಕಾಡಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೂ ಯುವಕನ ಪೋಷಕರು ತಾವು ಬೆದರಿಕೆ ಹಾಕಿದಂತೆಯೇ ಬಾಲಕಿಯನ್ನು ಅಪಹರಿಸಿ ತಮ್ಮ ಮನೆಯಲ್ಲಿರಿಸಿಕೊಂಡಿದ್ದಾರೆ ಎಂದು ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.