‘ಯುವಶಕ್ತಿಯನ್ನು ನಿರ್ಲಕ್ಷಿಸಬೇಡಿ’: ಯುವ ಕಾಕ್ರೋಚ್ ಗಳಿಗೆ ಅಣ್ಣಾ ಹಜಾರೆ ಬೆಂಬಲ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿರುವ ಆನ್ಲೈನ್ ವೇದಿಕೆ “ಕಾಕ್ರೋಚ್ ಜನತಾ ಪಾರ್ಟಿ” (Cockroach Janta Party)ಗೆ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಬೆಂಬಲ ಸೂಚಿಸಿದ್ದಾರೆ. ಸಾರ್ವಜನಿಕ ಚರ್ಚೆಗಳಲ್ಲಿ ದೇಶದ ಯುವಜನತೆ ತೋರುತ್ತಿರುವ ಉತ್ಸಾಹವನ್ನು ಕಡೆಗಣಿಸುವ ಬದಲು ಅವರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, “ಈ ಪಕ್ಷಕ್ಕೆ ಇಟ್ಟಿರುವ ‘ಜಿರಳೆ’ (ಕಾಕ್ರೋಚ್) ಎಂಬ ಹೆಸರು ಸೂಕ್ತವಾಗಿಲ್ಲದಿದ್ದರೂ, ಅದರ ಹಿಂದೆ ಇರುವ ದೊಡ್ಡ ಸಂದೇಶವು ದೇಶದ ಯುವಕರ ಹತಾಶೆಯನ್ನು ಪ್ರತಿಬಿಂಬಿಸುತ್ತದೆ. ದೇಶದ ಜನತೆ ಈ ಪಕ್ಷದ ಹಿಂದೆ ನಿಲ್ಲುತ್ತಿದ್ದಾರೆ. ಮೂಲತಃ ಈ ಪಕ್ಷಕ್ಕೆ ಕಾಕ್ರೋಚ್ ಎಂದು ಹೆಸರಿಡಲು ಕಾರಣವೇನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು” ಎಂದರು.
ಮುಂದುವರಿದು ಮಾತನಾಡಿದ ಅವರು, “ಯುವಶಕ್ತಿಯೇ ದೇಶದ ಶಕ್ತಿ. ಈ ಎರಡೂ ವಿಷಯಗಳು ಒಟ್ಟಿಗೆ ಸೇರಿದಾಗ, ಸರ್ಕಾರ ಅದನ್ನು ನಿರ್ಲಕ್ಷಿಸದೆ ಪ್ರೋತ್ಸಾಹಿಸಬೇಕು” ಎಂದು ಹೇಳಿದರು. ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಲೋಕಪಾಲ್ ಹೋರಾಟದ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’?
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಶಿಕ್ಷಣ ವ್ಯವಸ್ಥೆ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಆಡಳಿತ ವೈಫಲ್ಯಗಳ ವಿರುದ್ಧ ಮೀಮ್ಸ್ (Memes), ವ್ಯಂಗ್ಯಚಿತ್ರಗಳು ಹಾಗೂ ರಾಜಕೀಯ ವಿಡಂಬನೆಗಳ ಮೂಲಕ ಧ್ವನಿ ಎತ್ತಲು ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ಆರಂಭವಾಗಿತ್ತು. ಇತ್ತೀಚೆಗಷ್ಟೇ ಇದರ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಆ ನಂತರ “ಕಾಕ್ರೋಚ್ ಈಸ್ ಬ್ಯಾಕ್” (ಕಾಕ್ರೋಚ್ಗಳಿಗೆ ಸಾವಿಲ್ಲ) ಎಂಬ ಹೊಸ ಖಾತೆಯೊಂದಿಗೆ ಯುವಕರು ಮತ್ತೆ ಆನ್ ಲೈನ್ ನಲ್ಲಿ ಸಕ್ರಿಯರಾಗಿದ್ದಾರೆ.
ಸುಪ್ರೀಂ ಕೋರ್ಟ್ ವಿಚಾರಣೆಯೊಂದರ ಸಂದರ್ಭದಲ್ಲಿ ವಕೀಲರ ಅರ್ಹತೆಗೆ ಸಂಬಂಧಿಸಿ ವ್ಯಕ್ತವಾದ ಕೆಲವು ಟೀಕೆಗಳ ಬೆನ್ನಲ್ಲೇ ಈ ವಿಡಂಬನಾತ್ಮಕ ಅಭಿಯಾನ ಆರಂಭವಾಗಿತ್ತು. ಇದೀಗ ಅಣ್ಣಾ ಹಜಾರೆ ಅವರು ಈ ಡಿಜಿಟಲ್ ಚಳವಳಿಗೆ ಬೆಂಬಲ ನೀಡಿರುವುದು ದೇಶದ ಯುವ ಸಮುದಾಯದ ಗಮನ ಸೆಳೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























