ಕೆ.ತಲಗೂರಿನಲ್ಲಿ 23.20 ಎಕರೆ ಸರ್ಕಾರಿ ಜಾಗ ಒತ್ತುವರಿ, ತೆರವು
ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದಲ್ಲಿ ಸ.ನಂ 59ರಲ್ಲಿ (ಹಳೆ ಸ.ನಂ.48) 23.20 ಎಕರೆ ಆಲ್ದೂರು ಅರಣ್ಯ ವ್ಯಾಪ್ತಿಗೆ ಬರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಪೊಲೀಸರ ನೇತೃತ್ವದಲ್ಲಿ ತೆರವುಗೊಳಿಸಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ 23.20 ಎಕರೆ ಜಾಗದಲ್ಲಿ ತೋಟದ ಮಾಲೀಕರೊಬ್ಬರು ಒತ್ತುವರಿ ಮಾಡಿದ್ದು ಅದರಲ್ಲಿ ಕಾಫಿ ಬೆಳೆ,ಅಡಿಕೆ, ತೆಂಗು ಬೆಳೆಯಲಾಗಿತ್ತು. ಅದರಲ್ಲಿ ಸದ್ಯಕ್ಕೆ ಕಾಫಿ, ಅಡಿಕೆ ಬೆಳೆಯನ್ನು ಖುಲ್ಲಾಗೊಳಿಸಿ ಸುಮಾರು ಶೇ.65 ರಷ್ಟು ಸರ್ಕಾರಿ ಜಾಗವನ್ನು ಆದೇಶದಂತೆ ತೆರವು ಗೊಳಿಸಲಾಯಿತು. ಶೇ 35 ಭಾಗದಷ್ಟು ಜಾಗವನ್ನು ಖುಲ್ಲಾಗೊಳಿಸಲು ಬಾಕಿ ಇದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬುಧವಾರ ಬೆಳಿಗ್ಗೆ 5:30 ಗಂಟೆಯಿಂದ ಸಂಜೆ 3:30 ವರೆಗೆ ಅರಣ್ಯ ಇಲಾಖಾ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಸಮಕ್ಷಮದಲ್ಲಿ ಶಾಂತಿಯುತವಾಗಿ ಸರ್ಕಾರಿ ಜಾಗವನ್ನು ತೆರವುಗೊಳಿಸಿ ವಶ ಪಡಿಸಲಾಯಿತು.
ಮಾಲೀಕರಿಗೆ ನಾಲ್ಕು ವರ್ಷದ ಹಿಂದೆಯೇ ಈ ಬಗ್ಗೆ ನೊಟೀಸ್ ನೀಡಲಾಗಿತ್ತು. ಅದರಂತೆಯೇ ಜಾಗದಲ್ಲಿನ ಬೆಳೆ ತೆರವುಗೊಳಿಸಲಾಗಿದೆ.ಈ ಸಂದರ್ಭದಲ್ಲಿ ಬಾಳೂರು ಸಬ್ ಇನ್ ಸ್ಪೆಕ್ಟರ್ ದಿಲೀಪ್ ಕುಮಾರ್,ಎಎಸೈ ಟಿ.ಕೆ ಶಶಿ,ಹಾಗೂ 25 ಮಂದಿ ಡಿ.ಆರ್.ಪೊಲೀಸರ ತಂಡ ಹಾಗೂ ಆಲ್ದೂರು ವಲಯ ಅರಣ್ಯ ಅಧಿಕಾರಿಗಳಾದ ಹರೀಶ್ ಕುಮಾರ್, ಚರಣ್ ಕುಮಾರ್, ಶಿವಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ನವೀನ್, ಗೌತಮ್, ಸಂದೀಪ್, ಚೇತನ್, ವಿಜಯ ಕುಮಾರ್, ಗಸ್ತು ಅರಣ್ಯ ಪಾಲಕರಾದ ಮೊಹಸೀನ್, ಕಿಶೋರ್, ನಾಗರಾಜ್, ಉಮೇಶ್, ಸುರೇಶ್, ಅರಣ್ಯ ವೀಕ್ಷಕ ಗಿರೀಶ್, ಸುಧೀರ್, ಮತ್ತಿತರರು ಭಾಗವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth