ಗ್ಯಾರಂಟಿ ಯೋಜನೆ ಬಡವರಿಗೆ ಮಾತ್ರ ತಲುಪಬೇಕು ಎಂಬುದು ಬಹುತೇಕರ ಅಭಿಪ್ರಾಯ | ಸಚಿವ ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರು, ಮುಖಂಡರು ದೆಹಲಿಗೆ ಹೋದಾಗ ಎಐಸಿಸಿ ಕಚೇರಿಗೆ ಭೇಟಿ ನೀಡುವುದು ಸಂಪ್ರದಾಯ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ತಲುಪಬೇಕು ಎಂಬುದು ಬಹಳ ಜನರ ಅಭಿಪ್ರಾಯವಾಗಿದೆ. ಈಗಾಗಲೇ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ರೂ. 56 ಸಾವಿರ ಕೋಟಿ ಮೀಸಲಿಡಲಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವುದು ಸಾಧ್ಯವಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಚರ್ಚೆಗಳಾಗುತ್ತಿರುವುದು ನಿಜ. ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದು. ಪಕ್ಷದ ವೇದಿಕೆಯಲ್ಲಿ, ಸರ್ಕಾರದ ಹಂತದಲ್ಲಿ ಚರ್ಚೆಯಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.13ರಷ್ಟು ಮತ ಹೆಚ್ಚಾಗಿವೆ. ಗ್ಯಾರಂಟಿ ಯೋಜನೆಗಳಿಂದ ಮತ ಹೆಚ್ಚಾಗಿದೆ ಎಂದು ಯಾಕೆ ವಿಶ್ಲೇಷಣೆ ಮಾಡಬಾರದು ಎಂದ ಅವರು, ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ನನ್ನ ಅಭಿಪ್ರಾಯವೊಂದೇ ಮುಖ್ಯವಾಗುವುದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಹೋದರೆ ಗೊಂದಲ ಉಂಟಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಮೂಡಾ ವಿಚಾರದಲ್ಲಿ ರಾಜ್ಯಪಾಲರ ನಡೆಯ ಬಗ್ಗೆ ವಕ್ತಾರನಾಗಿ ನಾನೇನು ಹೇಳಲು ಹೋಗುವುದಿಲ್ಲ. ತಪ್ಪು ತೀರ್ಮಾನ ತೆಗೆದುಕೊಳ್ಳುತ್ತಿದ್ದೀರಿ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಡಿ. ಸಿಎಂ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ವಾಪಸ್ ಪಡೆಯುವಂತೆ ಕ್ಯಾಬಿನೆಟ್ ತೀರ್ಮಾನಿಸಿ ರಾಜ್ಯಪಾಲರಿಗೆ ಸಲಹೆ ಮಾಡಿದೆ. ಇದನ್ನು ರಾಜ್ಯಪಾಲರು ಸ್ವೀಕರಿಸಬೇಕು. ಇಲ್ಲವಾದರೆ ಮುಂದಿನ ಕ್ರಮದ ಬಗ್ಗೆ ಸಮರ್ಥನೆ ನೀಡಬೇಕಾಗುತ್ತದೆ ಎಂದು ಹೇಳಿದರು
ಒಳಮೀಸಲಾತಿ ಜಾರಿ ಮಾಡುವ ಕುರಿತು ಎಐಸಿಸಿಯವರು ರಾಜ್ಯ ಸರ್ಕಾರಕ್ಕೆ ಯಾವ ನಿರ್ದೇಶನ ನೀಡುತ್ತಾರೆಯೋ. ಅದರ ಪ್ರಕಾರ ಮುಂದುವರಿಯುತ್ತೇವೆ. ಈ ಬಗ್ಗೆ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಬೇಕು ಎಂದರು.
ಭೋವಿ ನಿಗಮದ ಮೇಲೆ ಸಿಐಡಿ ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಇದರ ಭಾಗವಾಗಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲಿ ನಡೆದಿರುವ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ. ಎಲ್ಲವನ್ನು ತಾರ್ಕಿಕ ಅಂತ್ಯಕ್ಕೆ ತರಬೇಕು ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: