ಶಿಕ್ಷಕರಿಗೆ 8 ಸಾವಿರ ಸಂಬಳ, ವಾಚ್ ಮನ್ ಗೆ 10 ಸಾವಿರ ಸಂಬಳ!: ಅಚ್ಚರಿ ತಂದ ನೇಮಕಾತಿ ಅಧಿಸೂಚನೆ
ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದ ಸರ್ಕಾರಿ ಪ್ರೌಢಶಾಲೆಯೊಂದು ಶಿಕ್ಷಕರ ಹುದ್ದೆಗೆ ಮತ್ತು ವಾಚ್ ಮನ್ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಆದ್ರೆ ಈ ಅಧಿಸೂಚನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗೆಪಾಟಲಿಗೀಡಾಗಿದೆ.
ಅರೆಕಾಲಿಕ ಶಿಕ್ಷಕರ ಹುದ್ದೆಗೆ ಹಾಗೂ ವಾಚ್ ಮನ್ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಅರೆಕಾಲಿಕ ಶಿಕ್ಷಕರಿಗೆ ಶೈಕ್ಷಣಿಕ ಅರ್ಹತೆ B.Sc./M.Sc ಇರಬೇಕು ಎಂದು ಸೂಚನೆಯಲ್ಲಿ ನೀಡಲಾಗಿದೆ. ವಾಚ್ ಮನ್ ಹುದ್ದೆಗೆ 10 ನೇ ತರಗತಿ ಅರ್ಹತೆಯಾಗಿದೆ. ಶಿಕ್ಷಕರ ಸಂಬಳ 8,450 ರೂಪಾಯಿ ಇದ್ದರೆ, ವಾಚ್ ಮನ್ ಗೆ 10,630 ರೂಪಾಯಿ ಎಂದು ನಮೂದಿಸಲಾಗಿದೆ.
B.Sc./M.Sc ಕಲಿತ ಶಿಕ್ಷಕರಿಗೆ ಕೇವಲ 8,450 ರೂಪಾಯಿ ವೇತನ ಇದ್ದರೆ, ಎಸ್ ಎಸ್ ಎಲ್ ಸಿ ಅರ್ಹತೆ ಹೊಂದಿದ ವಾಚ್ ಮನ್ ಗೆ 10,630 ರೂಪಾಯಿ ವೇತನ ಎಂದು ನಮೂದಿಸಿರುವುದು ಇದೀಗ ನಗೆಪಾಟಲಿಗೀಡಾಗಿದೆ.
ಅರೆಕಾಲಿಕ ಶಿಕ್ಷಕರಿಗೆ ನೀಡುವ ಕನಿಷ್ಠ ವೇತನವು ನರೇಗಾ ಕೂಲಿಗಿಂತ ಕಡಿಮೆಯಾಗಿದೆ. ನರೇಗಾ ಯೋಜನೆಯಡಿ ಕೆಲಸ ಮಾಡಿದಲ್ಲಿ ದಿನಕ್ಕೆ 300 ರೂಪಾಯಿಯಂತೆ ತಿಂಗಳಿಗೆ 9 ಸಾವಿರ ಗಳಿಸಬಹುದು. ಶಿಕ್ಷಕ ಹುದ್ದೆಗೆ ಕೇವಲ 8 ಸಾವಿರ ಮಾತ್ರ ಎನ್ನುವ ವಿಚಾರ ಇದೀಗ ಚರ್ಚೆಗೀಡಾಗುತ್ತಿದೆ.
ಇನ್ನು ಕೆಲವರು, ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಬದಲು ವಾಚ್ ಮನ್ ಹುದ್ದೆಗೆ ಅರ್ಜಿ ಸಲ್ಲಿಸುವುದೇ ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ. ಅರೆಕಾಲಿಕ ಶಿಕ್ಷಕರಿಗೆ ಸಿಗುವ ವೇತನ ಇದೇ ರೀತಿಯಲ್ಲಿರುತ್ತದೆ. ಕೆಲಸ ಹೆಚ್ಚು, ಆದರೆ ಸಂಬಳ ಕಡಿಮೆ. ಅರೆ ಕಾಲಿಕ ಶಿಕ್ಷಕರಿಗೆ ಕನಿಷ್ಠ ಗೌರವವನ್ನೂ ಈ ವ್ಯವಸ್ಥೆ ನೀಡುತ್ತಿಲ್ಲ. ಇಂತಹ ವ್ಯವಸ್ಥೆ ಬಗ್ಗೆ ಅರೆಕಾಲಿಕ ಶಿಕ್ಷಕರು ಮಾತನಾಡುವಂತಿಲ್ಲ. ಮಾತನಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭಯಕ್ಕೆ ಯಾರೂ ಮಾತನಾಡುತ್ತಿಲ್ಲ ಎನ್ನುವುದು ಸದ್ಯ ಚರ್ಚೆಯಾಗ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: