ಕಾವೇರಿ ಕಿಚ್ಚು: ಚಾಮರಾಜನಗರದಲ್ಲಿ ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರ ಪ್ರದರ್ಶನ ರದ್ದು, ರೈತರಿಂದ ಉಗ್ರ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಆದೇಶದ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಇದರ ಭಾಗವಾಗಿ ಚಾಮರಾಜನಗರದಲ್ಲಿ ತಮಿಳು ನಟ ಹಾಗೂ ರಾಜಕಾರಣಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಪ್ರದರ್ಶನವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಗರದ ಬಸವೇಶ್ವರ ಚಿತ್ರಮಂದಿರದ ಮುಂಭಾಗ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಭಿಕ್ಷೆ ಎತ್ತಿ ಹಣ ನೀಡುತ್ತೇವೆ, ವಿಜಯ್ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ ಕರುನಾಡಿನ ರೈತರ ಕಷ್ಟ ಏನೆಂಬುದನ್ನು ಅರಿಯಲಿ ಎಂದು ಪ್ರತಿಭಟನಾಕಾರರು ವ್ಯಂಗ್ಯವಾಡಿದರು.
ರೈತರ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತ ಚಿತ್ರಮಂದಿರದ ಸಿಬ್ಬಂದಿ, ನಟ ಜೋಸೆಫ್ ವಿಜಯ್ ಅವರ ಪೋಸ್ಟರ್ ಗಳನ್ನು ತೆರವುಗೊಳಿಸಿ ಇಂದಿನ ಎಲ್ಲಾ ಪ್ರದರ್ಶನಗಳನ್ನು ರದ್ದುಗೊಳಿಸಿದರು.
ತಮಿಳುನಾಡಿನ ಮುಖ್ಯಮಂತ್ರಿ ಕರ್ನಾಟಕಕ್ಕೆ ವಿಲನ್ ಆಗಿದ್ದಾರೆ. ವಿಲನ್ ವಿಜಯ್ ನಟನೆಯ ಚಿತ್ರವನ್ನು ಯಾವುದೇ ಕಾರಣಕ್ಕೂ ನಮ್ಮ ನೆಲದಲ್ಲಿ ಪ್ರದರ್ಶನ ಮಾಡಲು ಬಿಡುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಸಿದರು.
ಚಾಮರಾಜನಗರ ಸೋಮವಾರಪೇಟೆ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಹರಿಸಿದ್ದೇ ಆದರೆ ಗಡಿಯನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಚಾಮರಾಜೇಶ್ವರ ದೇಗುಲದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಚಾಮರಾಜನಗರ ಜಿಲ್ಲೆಯನ್ನು ಕೂಡಲೇ ಬರಪೀಡಿತ ಎಂದು ಘೋಷಿಸಬೇಕು ಹಾಗೂ ಗೋಶಾಲೆಗಳನ್ನು ತೆರೆದು ಮೇವು ಪೂರೈಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD


























