ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಕುಡಿಯಲು ಎಣ್ಣೆ ಸಿಗಲಿದೆ: ಯಾರೆಲ್ಲ ಕುಡಿಯಬಹುದು? ಏನೇನು ರೂಲ್ಸ್! - Mahanayaka
12:20 PM Thursday 12 - February 2026

ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ಕುಡಿಯಲು ಎಣ್ಣೆ ಸಿಗಲಿದೆ: ಯಾರೆಲ್ಲ ಕುಡಿಯಬಹುದು? ಏನೇನು ರೂಲ್ಸ್!

alcohol ban
12/02/2026

ರಿಯಾದ್: ಸೌದಿ ಅರೇಬಿಯಾ ತನ್ನ ದೇಶದಲ್ಲಿ ದಶಕಗಳಿಂದ ಜಾರಿಯಲ್ಲಿದ್ದ ಮದ್ಯಪಾನ ನಿಷೇಧ ನಿಯಮವನ್ನು ಸಡಿಲಗೊಳಿಸುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಸುಮಾರು 73 ವರ್ಷಗಳ ಸುದೀರ್ಘ ನಿಷೇಧದ ನಂತರ, ರಾಜಧಾನಿ ರಿಯಾದ್‌ ನಲ್ಲಿ ಮೊದಲ ಬಾರಿಗೆ ಮದ್ಯದ ಅಂಗಡಿಯನ್ನು ತೆರೆಯಲಾಗಿದ್ದು, ಆಯ್ದ ವಿದೇಶಿ ನಿವಾಸಿಗಳಿಗೆ ಮದ್ಯ ಖರೀದಿಸಲು ಅವಕಾಶ ನೀಡಲಾಗಿದೆ.

ಯಾರಿಗೆ ಸಿಗಲಿದೆ ಮದ್ಯ? (ಅರ್ಹತೆಗಳು): ಸೌದಿ ಸರ್ಕಾರದ ಈ ಹೊಸ ನಿಯಮವು ಕೇವಲ ಮುಸ್ಲಿಮೇತರ ವಿದೇಶಿ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ. ಮದ್ಯ ಖರೀದಿಸಲು ಈ ಕೆಳಗಿನ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ:

ಪ್ರೀಮಿಯಂ ರೆಸಿಡೆನ್ಸಿ ಪರ್ಮಿಟ್: ವಾರ್ಷಿಕ ಸುಮಾರು 1 ಲಕ್ಷ ಸೌದಿ ರಿಯಾಲ್ (ಅಂದಾಜು 22 ಲಕ್ಷ ರೂ.) ಪಾವತಿಸಿ ‘ಪ್ರೀಮಿಯಂ ರೆಸಿಡೆನ್ಸಿ’ ಪಡೆದವರಿಗೆ ಮಾತ್ರ ಅವಕಾಶ.

ಆದಾಯ ಮಿತಿ: ಕನಿಷ್ಠ ಮಾಸಿಕ 50,000 ಸೌದಿ ರಿಯಾಲ್ (ಅಂದಾಜು 11 ಲಕ್ಷ ರೂ.) ಆದಾಯ ಹೊಂದಿರುವ ಉನ್ನತ ಮಟ್ಟದ ಉದ್ಯೋಗಿಗಳು ಅಥವಾ ಹೂಡಿಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

ಮುಸ್ಲಿಮೇತರರಿಗೆ ಮಾತ್ರ: ಮದ್ಯ ಖರೀದಿಸುವ ವ್ಯಕ್ತಿ ಮುಸ್ಲಿಮೇತರನಾಗಿರಬೇಕು ಮತ್ತು ಅವರ ರೆಸಿಡೆನ್ಸಿ ಕಾರ್ಡ್‌ನಲ್ಲಿ ಇದನ್ನು ಸ್ಪಷ್ಟಪಡಿಸಿರಬೇಕು.

ಕಟ್ಟುನಿಟ್ಟಿನ ನಿಯಮಗಳು:

ಪ್ರವೇಶ ನಿರ್ಬಂಧ: ಅಂಗಡಿಯ ಒಳಗೆ ಹೋಗುವ ಮುನ್ನ ಮೊಬೈಲ್ ಫೋನ್‌ಗಳನ್ನು ವಿಶೇಷ ಬ್ಯಾಗ್‌ಗಳಲ್ಲಿ ಇರಿಸಿ ಸೀಲ್ ಮಾಡಲಾಗುತ್ತದೆ. ಯಾವುದೇ ಫೋಟೋ ಅಥವಾ ವಿಡಿಯೋ ತೆಗೆಯಲು ಅವಕಾಶವಿಲ್ಲ.

ಕೋಟಾ ಸಿಸ್ಟಮ್: ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ಮದ್ಯ ಖರೀದಿಸಬಹುದು ಎಂಬುದಕ್ಕೆ ‘ಪಾಯಿಂಟ್ಸ್’ ಆಧಾರಿತ ಮಿತಿ ಹೇರಲಾಗಿದೆ.

ಸ್ಥಳ ರಹಸ್ಯ: ಈ ಅಂಗಡಿಯು ರಿಯಾದ್‌ನ ರಾಜತಾಂತ್ರಿಕ ಪ್ರದೇಶದಲ್ಲಿದ್ದು (Diplomatic Quarter), ಇದಕ್ಕೆ ಯಾವುದೇ ಸೈನ್ ಬೋರ್ಡ್‌ಗಳಿಲ್ಲ ಮತ್ತು ಗೂಗಲ್ ಮ್ಯಾಪ್‌ನಲ್ಲೂ ಈ ಸ್ಥಳ ಲಭ್ಯವಿಲ್ಲ.

ಹಿನ್ನೆಲೆ: 1952ರಲ್ಲಿ ಸೌದಿ ದೊರೆ ಅಬ್ದುಲ್ ಅಜೀಜ್ ಅವರ ಪುತ್ರನೊಬ್ಬ ಮದ್ಯದ ಅಮಲಿನಲ್ಲಿ ಬ್ರಿಟಿಷ್ ರಾಜತಾಂತ್ರಿಕ ಅಧಿಕಾರಿಯನ್ನು ಕೊಂದ ಘಟನೆಯ ನಂತರ ಸೌದಿಯಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದೀಗ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ‘ವಿಷನ್ 2030’ ಯೋಜನೆಯ ಭಾಗವಾಗಿ, ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಮಹತ್ವದ ಬದಲಾವಣೆ ತರಲಾಗಿದೆ.

ಸದ್ಯಕ್ಕೆ ಇದು ಕೇವಲ ಶ್ರೀಮಂತ ವಿದೇಶಿ ನಿವಾಸಿಗಳು ಮತ್ತು ರಾಜತಾಂತ್ರಿಕರಿಗೆ ಮಾತ್ರ ಸೀಮಿತವಾಗಿದ್ದು, ಸಾಮಾನ್ಯ ಜನರಿಗೆ ಅಥವಾ ಪ್ರವಾಸಿಗರಿಗೆ ಇನ್ನು ಸಹ ಮದ್ಯ ಲಭ್ಯವಿಲ್ಲ ಎಂಬುದು ಗಮನಾರ್ಹ. ಈ ನಿಯಮದ ಪ್ರಕಾರ ಶ್ರೀಮಂತರು ಮಾತ್ರ ಎಣ್ಣೆ  ಕುಡಿಯಬಹುದು. ಬಡವರಿಗೆ ಕುಡಿಯಲು ಅವಕಾಶವಿಲ್ಲ, ಶ್ರೀಮಂತರು ಕುಡಿದರೆ ಸಮಸ್ಯೆ ಇಲ್ಲ, ಬಡವರು ಕುಡಿದರೆ ಸಮಸ್ಯೆಯೇ ಅಂತ ಕೇಳುವಂತಿಲ್ಲ… ಯಾಕಂದ್ರೆ ಅದು ಭಾರತ ಅಲ್ಲ…


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ