ಆಸ್ತಿಗಾಗಿ  ಕ್ರೌರ್ಯ; KSRTC ಚಾಲಕನ ಹತ್ಯೆಗೈದು ಮೃತದೇಹ ಸುಟ್ಟ ಪಾಪಿಗಳು! - Mahanayaka
1:53 PM Wednesday 18 - February 2026

ಆಸ್ತಿಗಾಗಿ  ಕ್ರೌರ್ಯ; KSRTC ಚಾಲಕನ ಹತ್ಯೆಗೈದು ಮೃತದೇಹ ಸುಟ್ಟ ಪಾಪಿಗಳು!

hassan
18/02/2026

ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆಯ ನೌಕರನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೇವಲ ಎರಡು ಎಕರೆ ಜಮೀನಿಗಾಗಿ ಸ್ವಂತ ದಾಯಾದಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ವಿವರ:
ಮೃತ ವ್ಯಕ್ತಿಯನ್ನು ವೀರಪ್ಪ (58) ಎಂದು ಗುರುತಿಸಲಾಗಿದೆ. ಇವರು ಕೆಎಸ್‌ ಆರ್‌ ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ನಿವೃತ್ತಿ ಅಂಚಿನಲ್ಲಿದ್ದರು. ವೀರಪ್ಪನವರ ಚಿಕ್ಕಪ್ಪ ಬಾಗಲಯ್ಯ ಎಂಬುವವರು ತಮಗೆ ಸೇರಿದ 2 ಎಕರೆ ಜಮೀನನ್ನು ವೀರಪ್ಪನ ಹೆಸರಿಗೆ ದಾನಪತ್ರದ ಮೂಲಕ ಬರೆದುಕೊಟ್ಟಿದ್ದರು. ಬಾಗಲಯ್ಯ ಅವರ ನಿಧನದ ನಂತರ ಈ ಆಸ್ತಿ ವೀರಪ್ಪನವರ ಹೆಸರಿಗೆ ನೋಂದಣಿಯಾಗಿತ್ತು.

ಆದರೆ, ಈ ಆಸ್ತಿ ಹಂಚಿಕೆ ವಿಚಾರವಾಗಿ ಬಾಗಲಯ್ಯ ಅವರ ಮಕ್ಕಳಾದ ಮಲ್ಲಮ್ಮ ಮತ್ತು ಮಹದೇವಮ್ಮ ಕ್ಯಾತೆ ತೆಗೆದಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿತ್ತು. ಮಂಗಳವಾರ ಆಲೂರು ಜೆಎಂಎಫ್‌ ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಹಿಂತಿರುಗುತ್ತಿದ್ದ ವೀರಪ್ಪ ಅವರನ್ನು ಸಂಜೆ ವೇಳೆ ಜಮೀನಿನ ಬಳಿ ಅಡ್ಡಗಟ್ಟಿದ ದಾಯಾದಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ವೀರಪ್ಪ ಅವರನ್ನು ಕೊಲೆ ಮಾಡಿದ ನಂತರ, ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

11 ಜನರ ವಿರುದ್ಧ ಕೇಸ್:

ವೀರಪ್ಪ ಅವರ ಪುತ್ರ ವಿವೇಕ್ ನೀಡಿದ ದೂರಿನನ್ವಯ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲ್ಲಮ್ಮ, ಮಹದೇವಮ್ಮ, ಹರೀಶ್, ಲೋಕೇಶ್, ಮಹದೇವ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ