ಲೂಡೋ ಆಟದ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು - Mahanayaka

ಲೂಡೋ ಆಟದ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು

ullala news
22/02/2026

ಉಳ್ಳಾಲ: ಸಹೋದರ-ಸಹೋದರಿಯರ ಜೊತೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಪ್ಲಾಸ್ಟಿಕ್ ಕಾಯಿನ್ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ನಡೆದಿದೆ.

ಘಟನೆಯ ವಿವರ:

ಮೃತ ಬಾಲಕಿಯನ್ನು ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕಾ (8) ಎಂದು ಗುರುತಿಸಲಾಗಿದೆ. ತನುಷ್ಕಾ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಕೆಲಸಕ್ಕೆ ಹೋಗಲು ಅನುಕೂಲವಾಗಲೆಂದು ಕುಟುಂಬವು ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಿತ್ತು.

ಶನಿವಾರ ಶಾಲೆಗೆ ರಜೆ ಇದ್ದ ಕಾರಣ ತನುಷ್ಕಾ ತನ್ನ ಅಣ್ಣ ಮತ್ತು ತಂಗಿಯ ಜೊತೆ ಲೂಡೋ ಆಟವಾಡುತ್ತಿದ್ದಳು. ಈ ವೇಳೆ ಆಟದಲ್ಲಿ ಬಳಸುವ ಶಂಕು (Cone) ಆಕಾರದ ಪ್ಲಾಸ್ಟಿಕ್ ಕಾಯಿನ್ ಅನ್ನು ಆಕೆ ಆಕಸ್ಮಿಕವಾಗಿ ನುಂಗಿದ್ದಾಳೆ. ತಕ್ಷಣವೇ ಆಕೆಗೆ ಉಸಿರುಗಟ್ಟಿದ್ದು, ಗಾಬರಿಗೊಂಡ ತಾಯಿ ನೆರೆಹೊರೆಯವರ ಸಹಾಯದೊಂದಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಬಾಲಕಿಯ ಮರಣೋತ್ತರ ಪರೀಕ್ಷೆಯ ವೇಳೆ ಆಕೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕಾಯಿನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ತನುಷ್ಕಾ ತೊಕ್ಕೊಟ್ಟಿನ ಖಾಸಗಿ ಹೈಸ್ಕೂಲ್‌ ನ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸಾವು ಕುಟುಂಬಸ್ಥರಲ್ಲಿ ಮತ್ತು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ