ಇಬ್ಬರನ್ನು ಬಲಿಪಡೆದ ಒಂಟಿ ಸಲಗ ಕೊನೆಗೂ ಲಾಕ್: ಕಾಫಿನಾಡಲ್ಲಿ ಆನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು; ಅರಣ್ಯ ಇಲಾಖೆ ವಿರುದ್ಧ ಜನರ ತೀವ್ರ ಆಕ್ರೋಶ!
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇಂದು ಮತ್ತೊಬ್ಬ ಮಹಿಳಾ ಕಾರ್ಮಿಕಳನ್ನು ಆನೆ ಬಲಿಪಡೆದಿದೆ. ಒಂದೇ ವಾರದ ಅಂತರದಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದ್ದು, ಅರಣ್ಯ ಇಲಾಖೆಯ ವೈಫಲ್ಯದ ವಿರುದ್ಧ ಮಲೆನಾಡಿಗರ ಆಕ್ರೋಶ ಕಟ್ಟೆ ಒಡೆದಿದೆ.
ಅದೇ ಜಾಗ, ಅದೇ ಆನೆ, ಮತ್ತೊಂದು ಬಲಿ!
ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಈ ಭೀಕರ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಕೂಲಿ ಕಾರ್ಮಿಕ ಮಹಿಳೆ ಬೋರಮ್ಮ (33) ಆನೆ ದಾಳಿಗೆ ಬಲಿಯಾದ ದುರ್ದೈವಿಯಾಗಿದ್ದಾರೆ. ಕಳೆದ ಸೋಮವಾರವಷ್ಟೇ ಇದೇ ಜಾಗದಲ್ಲಿ ಈ ಒಂಟಿ ಸಲಗ ಓರ್ವ ಕಾರ್ಮಿಕನನ್ನು ಬಲಿಪಡೆದಿತ್ತು. ಸತತ ದಾಳಿಗಳಿಂದ ಆನೆಗೆ ಮದವೇರಿದೆ ಎಂಬ ಕಾರಣ ನೀಡಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇಲಾಖೆಯ ಈ ನಿರ್ಧಾರವೇ ಇಂದು ಮತ್ತೊಂದು ಜೀವ ಹೋಗಲು ಕಾರಣವಾಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಹಸ್ಯವಾಗಿ ಶವ ಸಾಗಾಟ:
ಘಟನೆಯ ನಂತರ ಜನರ ಆಕ್ರೋಶಕ್ಕೆ ಹೆದರಿದ ಅರಣ್ಯ ಇಲಾಖೆ ಅಧಿಕಾರಿಗಳು, ಯಾರಿಗೂ ತಿಳಿಯದಂತೆ ಮೃತದೇಹವನ್ನು ಪಿಕಪ್ ವಾಹನದಲ್ಲಿ ಟಾರ್ಪಲ್ನಿಂದ ಸುತ್ತಿ ಸಾಗಿಸಲು ಯತ್ನಿಸಿದರು ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಎನ್.ಆರ್.ಪುರ ತಾಲೂಕಿನ ಕಡಬಗೆರೆಯಲ್ಲಿ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ರಾಜ್ಯ ಹೆದ್ದಾರಿಯಲ್ಲಿ ಮೃತದೇಹವನ್ನಿಟ್ಟು ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು. ಅರಣ್ಯ ಸಚಿವರು ಸ್ಥಳಕ್ಕೆ ಬರುವವರೆಗೂ ಶವ ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
- ಶಾಶ್ವತ ಪರಿಹಾರಕ್ಕೆ ಆಗ್ರಹ: “ಕೇವಲ 20 ಲಕ್ಷ ರೂಪಾಯಿ ಪರಿಹಾರದಿಂದ ಜೀವ ಮರಳಿ ಬರುವುದಿಲ್ಲ. ನಮಗೆ ಪರಿಹಾರ ಬೇಡ, ಆನೆ ಹಾವಳಿಗೆ ಶಾಶ್ವತ ಮುಕ್ತಿ ಬೇಕು” ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
- ನೂಕಾಟ: ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ ಟೈರ್ಗಳಿಗೆ ಬೆಂಕಿ ಹಚ್ಚಲು ಯತ್ನಿಸಲಾಯಿತು. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತಳ್ಳಾಟ-ನೂಕಾಟ ನಡೆಯಿತು. ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಾಗ, ಆತನ ಬಿಡುಗಡೆಗಾಗಿ ಜನರು ಪಟ್ಟು ಹಿಡಿದರು.
ಸಾವು ಸಂಭವಿಸಿದ ಬೆನ್ನಲ್ಲೇ ಆನೆ ಸೆರೆ!
ಜನರ ಆಕ್ರೋಶ ಮಿತಿಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಘಟನೆ ನಡೆದ ಅರ್ಧ ಗಂಟೆಯಲ್ಲೇ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆಹಿಡಿದಿದೆ. ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಸಮೀಪದ ಕೆರೆಮನೆ ಎಂಬಲ್ಲಿ ವೈದ್ಯರ ತಂಡ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿದೆ. ಸದ್ಯ ಸಾಕಾನೆಗಳ ನೆರವಿನಿಂದ ಆನೆಯನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಕಾಡಾನೆ ದಾಳಿಗೆ ಇದುವರೆಗೆ ಸುಮಾರು 9 ಜನರು ಬಲಿಯಾಗಿದ್ದಾರೆ. ಶೃಂಗೇರಿ ಶಾಸಕ ರಾಜೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು. ಸರಕಾರ ಮತ್ತು ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ಜನಸಾಮಾನ್ಯರು ಈಗ ಬೀದಿಗಿಳಿದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























