ನರ್ಸ್ ನಿರ್ಲಕ್ಷ್ಯಕ್ಕೆ 6 ತಿಂಗಳ ಮಗುವಿನ ಬೆರಳೇ ತುಂಡು!: ಬೆಂಗಳೂರಿನ ಇಂದಿರಾನಗರದ ಆಸ್ಪತ್ರೆ ವಿರುದ್ಧ ದೂರು ದಾಖಲು
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನರ್ಸ್ ಮಾಡಿದ ಎಡವಟ್ಟಿನಿಂದಾಗಿ ಕೇವಲ 6 ತಿಂಗಳ ಹಸುಗೂಸಿನ ಬೆರಳು ಕಟ್ ಆಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಇಂದಿರಾನಗರದಲ್ಲಿರುವ ‘ಚಿನ್ಮಯ್ ಮಿಷನ್ ಆಸ್ಪತ್ರೆ’ಯಲ್ಲಿ ಈ ಘಟನೆ ನಡೆದಿದೆ.
ಏನಿದು ಘಟನೆ?
ಜ್ವರ ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಪೋಷಕರು ಫೆಬ್ರವರಿ 19ರಂದು ಆಸ್ಪತ್ರೆಗೆ ದಾಖಲಿಸಿದ್ದರು. ಸತತ 5 ದಿನಗಳ ಚಿಕಿತ್ಸೆಯ ನಂತರ ಮಗು ಚೇತರಿಸಿಕೊಂಡಿತ್ತು. ಫೆಬ್ರವರಿ 24ರಂದು ಮಗುವನ್ನು ಡಿಸ್ಚಾರ್ಜ್ ಮಾಡಲು ಆಸ್ಪತ್ರೆ ಸೂಚಿಸಿತ್ತು. ಪೋಷಕರು ಬಿಲ್ಲಿಂಗ್ ಕೌಂಟರ್‌ನಲ್ಲಿ ಹಣ ಪಾವತಿಸಲು ಹೋಗಿದ್ದ ಸಂದರ್ಭದಲ್ಲಿ, ಮಗುವಿನ ಕೈಗೆ ಹಾಕಲಾಗಿದ್ದ ಡ್ರಿಪ್ಸ್‌ನ ಡ್ರೆಸ್ಸಿಂಗ್ (ಪಟ್ಟಿ) ತೆಗೆಯುವಾಗ ನರ್ಸ್ ಮಗುವಿನ ಎಡಗೈ ಕಿರುಬೆರಳಿನ ಅರ್ಧ ಭಾಗವನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸತ್ಯ ಮರೆಮಾಚಲು ಯತ್ನಿಸಿದರೇ ಆಸ್ಪತ್ರೆ ಸಿಬ್ಬಂದಿ?
ಘಟನೆಯ ನಂತರ ಮಗುವನ್ನು ತರಾತುರಿಯಲ್ಲಿ ತುರ್ತು ಚಿಕಿತ್ಸಾ ಘಟಕಕ್ಕೆ (ER) ಕರೆದೊಯ್ದು ಡ್ರೆಸ್ಸಿಂಗ್ ಮಾಡಲಾಗಿದೆ. “ಇದು ದೊಡ್ಡ ಗಾಯವೇನಲ್ಲ, ಬೆರಳು ತಾನಾಗಿಯೇ ಗುಣವಾಗುತ್ತದೆ” ಎಂದು ಹೇಳುವ ಮೂಲಕ ಆಸ್ಪತ್ರೆಯು ತನ್ನ ತಪ್ಪು ಮುಚ್ಚಿ ಹಾಕಲು ಪ್ರಯತ್ನಿಸಿದೆ ಎಂದು ಮಗುವಿನ ತಂದೆ ವಿಜಯ್ ಕುಮಾರ್ ಆರೋಪಿಸಿದ್ದಾರೆ.
ದೂರು ದಾಖಲು:
ತಮ್ಮ ಮಗುವಿನ ಬೆರಳು ತುಂಡಾಗಲು ಕಾರಣರಾದ ನರ್ಸ್ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಮಗು ಗಂಭೀರ ಗಾಯದಿಂದ ನರಳುತ್ತಿದ್ದು, ಆಸ್ಪತ್ರೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























