ಸರ್ಕಾರಿ ಶಾಲೆಗಳ ಪರ ಮತ್ತೊಂದು ಹೋರಾಟ ಆರಂಭಿಸಿದ ಕಾಗ್ರೋಚ್ ಜನತಾ ಪಾರ್ಟಿ!
ಛತ್ರಪತಿ ಸಂಭಾಜಿನಗರ (ಔರಂಗಾಬಾದ್): ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ಎತ್ತಿಹಿಡಿಯಲು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ಸ್ಕೂಲ್ ಠೀಕ್ ಕರೋ’ (ಶಾಲೆಗಳನ್ನು ಸರಿಪಡಿಸಿ) ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ತಮ್ಮ ಸ್ವಂತ ಜಿಲ್ಲೆಯಾದ ಹಿಂಗೋಲಿಯ ‘ಸಂತುಕ್ ಪಿಂಪ್ರಿ’ ಗ್ರಾಮದ ಸರ್ಕಾರಿ ಶಾಲೆಯಿಂದ ಈ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಶಾಲೆಯ ಪ್ರಥಮ ಸಾಮಾಜಿಕ ಆಡಿಟ್ (Social Audit) ನಡೆಸಿದರು.
ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅಭಿಜೀತ್ ದೀಪ್ಕೆ ಸಂವಾದ ನಡೆಸಿದ್ದು, ಶಾಲೆಯಲ್ಲಿನ ಕನಿಷ್ಠ ಸೌಲಭ್ಯಗಳ ಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ, ಮಕ್ಕಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್ ಗಳಿಲ್ಲ, ನೈರ್ಮಲ್ಯವಿಲ್ಲದ ಶೌಚಾಲಯಗಳು ಹಾಗೂ ನೀರು ಪೂರೈಕೆಯ ಅಭಾವ, ಒಡೆದುಹೋದ ಕಿಟಕಿಗಳು ಮತ್ತು ಕಳಪೆ ಮೂಲಸೌಕರ್ಯಗಳು ಕಂಡು ಬಂತು.
“ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ ನಮ್ಮ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದಿರುವುದು ದುರಂತ,” ಎಂದು ಅಭಿಜೀತ್ ದೀಪ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗ್ರಾಮದ ಸರಪಂಚ್ ಅವರೊಂದಿಗೆ ಚರ್ಚಿಸಲಾಗಿದ್ದು, ಮುಂಬರುವ ಒಂದು ವಾರದೊಳಗೆ ಶಾಲೆಯ ಈ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸರಪಂಚ್ ಭರವಸೆ ನೀಡಿದ್ದಾರೆ.
‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಉದ್ದೇಶ:
ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಪ್ರಕಾರ, ಈ ಅಭಿಯಾನದ ಮೂಲಕ ದೇಶಾದ್ಯಂತ ಗ್ರಾಮೀಣ ಭಾಗದ ಶಾಲೆಗಳಲ್ಲಿನ ಕೊರತೆಗಳನ್ನು ಸಾರ್ವಜನಿಕರು ಹಾಗೂ ಪೋಷಕರು ಪ್ರಶ್ನಿಸುವಂತೆ ಮಾಡುವುದು. ಸಾರ್ವಜನಿಕರು ತಮ್ಮ ಊರಿನ ಶಾಲೆಗಳ ಸ್ಥಿತಿಗತಿಯ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲು ವಿಶೇಷ ಮೌಲ್ಯಮಾಪನ ಫಾರ್ಮ್ ಲಭ್ಯಗೊಳಿಸಲಾಗುವುದು.
ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಬೆಂಚ್ಗಳು ಹಾಗೂ ಬಿಸಿಯೂಟದ ಗುಣಮಟ್ಟದ ಮೇಲೆ ಈ ಅಭಿಯಾನ ಗಮನ ಹರಿಸಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























