ರಕ್ಷಾ ಬಂಧನ: ಇಲ್ಲಿ ಸಹೋದರರ ರಕ್ಷಣೆಯಲ್ಲಿ ಮಹಿಳೆಯರದ್ದೇ ಮೇಲುಗೈ: ರಕ್ಷಾಬಂಧನದ ಅರ್ಥವನ್ನೇ ಬದಲಿಸಿದ ಸಹೋದರಿಯರು
ರಕ್ಷಾಬಂಧನ ಎಂದರೆ ಅಣ್ಣ ಅಥವಾ ತಮ್ಮ ತನ್ನ ತಂಗಿ ಅಥವಾ ಅಕ್ಕನಿಗೆ ರಕ್ಷಣೆ ನೀಡುವ ಭರವಸೆ ನೀಡುವ ಹಬ್ಬ. ಆದರೆ ಜೈಪುರದ ಆಸ್ಪತ್ರೆಗಳಲ್ಲಿ ಈ ಸಂಪ್ರದಾಯದ ಚಿತ್ರಣವೇ ಬದಲಾಗಿದೆ. ಇಲ್ಲಿ ಸಹೋದರಿಯೊಬ್ಬಳು ತಮ್ಮ ಕಿಡ್ನಿ (ಮೂತ್ರಪಿಂಡ) ದಾನ ಮಾಡುವ ಮೂಲಕ ತನ್ನ ಸಹೋದರನ ಜೀವ ಉಳಿಸಿ ನಿಜವಾದ ರಕ್ಷಕರಾಗುತ್ತಿದ್ದಾರೆ.
37 ವರ್ಷದ ರಾಮಸ್ವರೂಪ್ ಗುರ್ಜರ್ ತೀವ್ರ ಬೆನ್ನುನೋವಿನಿಂದಾಗಿ ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದ್ದರು. ಇದರಿಂದಾಗಿ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಬದುಕಲು ಕಿಡ್ನಿ ಕಸಿ ಅನಿವಾರ್ಯವಾಗಿದ್ದ ಆ ಕಷ್ಟದ ಸಮಯದಲ್ಲಿ, ಅವರ 60 ವರ್ಷದ ಅಕ್ಕ ಸುಗಣಾ ಗುರ್ಜರ್ ಯಾವುದೇ ಹಿಂದೇಟು ಹಾಕದೆ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಲು ಮುಂದೆ ಬಂದರು.
ಆಗಸ್ಟ್ 25, 2023 ರಂದು ಜೈಪುರದ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಯಿತು. ಇಂದು ರಾಮಸ್ವರೂಪ್ ಸಂಪೂರ್ಣ ಆರೋಗ್ಯವಾಗಿದ್ದು, ತಮ್ಮ ಹಳ್ಳಿಯಲ್ಲಿ ಮತ್ತೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸುಗಣಾ ಕೂಡ ಕಿಡ್ನಿ ದಾನದ ನಂತರ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. “ನನ್ನ ಜೀವ ಉಳಿಸಿದ ನನ್ನ ಅಕ್ಕನಿಗೆ ನಾನು ಆಜೀವ ಋಣಿ, ಅವಳಿಂದಾಗಿಯೇ ನಾನು ಇಂದು ಆರೋಗ್ಯವಾಗಿದ್ದೇನೆ,” ಎಂದು ರಾಮಸ್ವರೂಪ್ ಭಾವುಕರಾಗಿ ಹೇಳುತ್ತಾರೆ.
ಜೈಪುರದ ಸರ್ಕಾರಿ ಸವಾಯ್ ಮಾನ್ ಸಿಂಗ್ (SMS) ಆಸ್ಪತ್ರೆಯ ಅಂಕಿಅಂಶಗಳು ಮಹಿಳೆಯರ ಈ ನಿಸ್ವಾರ್ಥ ತ್ಯಾಗವನ್ನು ಎತ್ತಿ ತೋರಿಸುತ್ತವೆ. ಆಸ್ಪತ್ರೆಯಲ್ಲಿ ಇದುವರೆಗೆ 882 ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿವೆ. ಈ ಪೈಕಿ 31 ಪ್ರಕರಣಗಳಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ಕಿಡ್ನಿ ದಾನ ಮಾಡಿದ್ದಾರೆ. ಆದರೆ, ಅಚ್ಚರಿಯ ವಿಷಯವೆಂದರೆ, ಸಹೋದರನೊಬ್ಬ ತನ್ನ ಸಹೋದರಿಗೆ ಕಿಡ್ನಿ ದಾನ ಮಾಡಿರುವ ಕೇವಲ ಒಂದು ಪ್ರಕರಣ ಮಾತ್ರ ದಾಖಲಾಗಿದೆ.
ಎಸ್ ಎಂಎಸ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಧನಂಜಯ್ ಅಗರ್ವಾಲ್ ಅವರ ಪ್ರಕಾರ, ಒಡಹುಟ್ಟಿದವರ ನಡುವೆ ಎಚ್ಎಲ್ಎ (HLA – Human Leukocyte Antigen) ಮ್ಯಾಚಿಂಗ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಕಿಡ್ನಿ ಕಸಿಯ ಯಶಸ್ಸಿನ ಪ್ರಮಾಣ ಶೇ.100 ರಷ್ಟಿರುತ್ತದೆ ಹಾಗೂ ದೇಹವು ಕಿಡ್ನಿಯನ್ನು ತಿರಸ್ಕರಿಸುವ ಅಪಾಯ ಬಹಳ ಕಡಿಮೆ ಇರುತ್ತದೆ.
ಮತ್ತೊಂದು ಜೀವ ಉಳಿಸಲು ಸಜ್ಜಾದ ಸಹೋದರಿ
ಈ ಬಾರಿಯ ರಕ್ಷಾಬಂಧನದ ಸಂದರ್ಭದಲ್ಲಿ ಎಸ್ ಎಂಎಸ್ ಆಸ್ಪತ್ರೆಯಲ್ಲಿ ಮತ್ತೊಂದು ಇಂತಹದ್ದೇ ಪ್ರಕರಣ ಕಾಯುತ್ತಿದೆ. ನೈನಿತಾಲ್ ಮೂಲದ 28 ವರ್ಷದ ನಿತಿನ್ ಸೈನಿ ಕಳೆದ 7 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದೀಗ ಅವರ 29 ವರ್ಷದ ಸಹೋದರಿ ಸುನೀತಾ ಸೈನಿ ತನ್ನ ತಮ್ಮನಿಗೆ ಕಿಡ್ನಿ ದಾನ ಮಾಡಲು ಸಜ್ಜಾಗಿದ್ದಾರೆ. ಸುನೀತಾ ಇನ್ನೂ ಅವಿವಾಹಿತೆಯಾಗಿದ್ದರೂ, ತನ್ನ ತಮ್ಮನ ಜೀವ ಉಳಿಸಲು ಈ ತ್ಯಾಗಕ್ಕೆ ಮುಂದಾಗಿದ್ದಾಳೆ.
ಪುರುಷರು ಕಿಡ್ನಿ ದಾನ ಮಾಡುವುದರಿಂದ ಭವಿಷ್ಯದಲ್ಲಿ ದೈಹಿಕವಾಗಿ ದುರ್ಬಲರಾಗಬಹುದು ಅಥವಾ ಕೆಲಸ ಮಾಡಲು ಕಷ್ಟವಾಗಬಹುದು ಎಂಬ ಭಯದಿಂದ ಹಿಂದೆ ಸರಿಯುತ್ತಾರೆ. ಆದರೆ ಮಹಿಳೆಯರು ಮಾತ್ರ ತಮ್ಮ ಕುಟುಂಬ ಹಾಗೂ ಸಹೋದರರ ಮೇಲಿನ ನಿಸ್ವಾರ್ಥ ಪ್ರೀತಿಗಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜೀವ ರಕ್ಷಕರಾಗಿ ನಿಲ್ಲುತ್ತಿರುವುದು ಈ ವರದಿಯಿಂದ ಸ್ಪಷ್ಟವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























